Krithi Shetty Interview -
ರಾಜ್ಯಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಪತ್ನಿ ಕೃತಿ ಶೆಟ್ಟಿ ನಟಿಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಮಿಳು, ತೆಲುಗಿನ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲೂ ಹೆಚ್ಚು ಸಕ್ರಿಯರಾಗಿದ್ದಾರೆ. ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಅಮರ್ಥ' ಮತ್ತು "ಟಾಸ್' ಚಿತ್ರಗಳು ಸೆ. 18ರಂದು ರಿಲೀಸ್ ಆಗುತ್ತಿದ್ದು, ಇನ್ನೂ ಕೆಲ ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ಇತ್ತೀಚೆಗಷ್ಟೆ ಕೃತಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, ಇದುವರೆಗಿನ ಪಯಣ, ಮುಂದಿನ ಪ್ರಾಜೆಕ್ಟ್ಗಳು ಸೇರಿ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
- ತಮಿಳಿನ ಒಂಬತ್ತು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದೇನೆ. "ಪ್ರೀಮಿಯರ್ ಪದ್ಮಿನಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ. ನಂತರ "ಮರ್ಯಾದೆ ಪ್ರಶ್ನೆ', "ರಂಗನಾಯಕ', "ಮಾನ್ಸೂನ್ ರಾಗ' ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದೆ. ಇದೀಗ "ಟಾಸ್', "ಅಮರ್ಥ' ಒಂದೇ ದಿನ ರಿಲೀಸ್ ಆಗುತ್ತಿವೆ. ಜತೆಗೆ "ಶಂಕರಾಭರಣ'ದಲ್ಲಿ ಶೈನ್ ಶೆಟ್ಟಿ ಅಕ್ಕಳಾಗಿ, "ಕುಡ್ಲ ಕಪ್' ವೆಬ್ಸರಣಿಯಲ್ಲಿ ಪೃಥ್ವಿ ಅಂಬರ್ ಅಕ್ಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ. "ರೋಷಿನಿ' ಎಂಬ ಮಹಿಳಾ ಪ್ರಧಾನ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ. ಇದುವರೆಗೆ ನನಗೆ ಎಲ್ಲ ಚಿತ್ರರಂಗಗಳಲ್ಲೂ ಒಳ್ಳೆಯ ಪಾತ್ರಗಳೇ ಸಿಕ್ಕಿವೆ.
* ತಮಿಳಿನಲ್ಲಿ ನಾಯಕಿಯಾಗಿ ಮಿಂಚಿ ಕನ್ನಡದಲ್ಲಿ ಪೋಷಕ ಪಾತ್ರಕ್ಕೆ ಸೀಮಿತವಾಗುವುದು ಕಷ್ಟವಾಗಲಿಲ್ಲವೇ?
- ನಾನು ಮೂಲತಃ ರಂಗಭೂಮಿಯವಳು. ಹೀಗಾಗಿ ಚಿಕ್ಕ ಪಾತ್ರ, ದೊಡ್ಡ ಪಾತ್ರ ಅಂತ ಬರುವುದಿಲ್ಲ. ಯಾವ ಪಾತ್ರವಾದರೂ ಖುಷಿಯೇ. ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿಕೊಂಡಿದ್ದಾರೆ ಅಂದರೆ, ಅವರ ನಂಬಿಕೆ ಮತ್ತು ಪಾತ್ರಕ್ಕೆ ನ್ಯಾಯ ಒದಗಿಸುವುದಷ್ಟೇ ನನಗೆ ಮುಖ್ಯ. ಜತೆಗೆ ನಾಯಕಿಯಾಗಿ ನಟಿಸುವುದು ಬೋರಿಂಗ್. ವರ್ಷಕ್ಕೆ ಒಂದೋ, ಎರಡೋ ಚಿತ್ರಗಳು, ಎರಡೋ ಮೂರೋ ಹಾಡುಗಳಿರುತ್ತವೆ ಅನ್ನೋದನ್ನು ಬಿಟ್ಟರೆ ಹೆಚ್ಚು ಪ್ರಾಮುಖ್ಯವಿರುವುದಿಲ್ಲ. ಸ್ಟಾರ್ ನಟಿಯಾಗಿರದಿದ್ದರೆ ದಣ ಭಾರತ ಚಿತ್ರರಂಗದಲ್ಲಿ ಹೆಚ್ಚು ಮಹತ್ವವಿರುವುದಿಲ್ಲ. ನಾನು ಬಂದ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳುವುದಿಲ್ಲ. ನನ್ನದೇ ಕೆಲ ಕಂಡೀಷನ್ಗಳನ್ನು ಹಾಕಿಕೊಂಡಿದ್ದೇನೆ. ಹಾಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ.
* ಹಾಗಾದರೆ ಯಾವ ರೀತಿಯ ಪಾತ್ರಗಳು ನಿಮಗೆ ಇಷ್ಟವಾಗುತ್ತವೆ
- ತೆಲುಗಿನ "ಪೋಚಮ್ಮ' ಎಂಬ ವೆಬ್ಸರಣಿಯಲ್ಲಿ ನಟಿಸಿದೆ. ಮೊದಲರ್ಧ ಒಳ್ಳೆಯವಳಾಗಿ, ದ್ವೀತಿಯಾರ್ಧದಲ್ಲಿ ವಿಲನ್ ಆಗಿ ಬದಲಾಗುವ ಪಾತ್ರ. "ಇರೈಮಗಳ್' ಎಂಬ ತಮಿಳು ಚಿತ್ರದಲ್ಲಿ ಮದುವೆಗೂ ಮುನ್ನ, ಮದುವೆಯ ನಂತರದ ಹಾಗೂ 16 ವರ್ಷದ ಮಗಳ ತಾಯಿಯಾಗಿ ಮೂರು ಲುಕ್ಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. ಹೀಗಾಗಿ ನಿರ್ದೇಶಕರು ಹೇಳದಿದ್ದರೂ ನಾನೇ ತೂಕ ಇಳಿಸಿಕೊಂಡೆ. ಇಂತಹ ಪಾತ್ರಗಳು ನನಗೆ ಬೋರ್ ಅನ್ನಿಸುವುದಿಲ್ಲ. ಕೆಲ ದಿನಗಳ ಕಾಲ ಒಂದು ಪಾತ್ರವನ್ನು ಬಾಳಿ ಅದರ ಶೂಟಿಂಗ್ ಮುಗಿದ ಬಳಿಕ ಇನ್ನೊಂದು ಪಾತ್ರಕ್ಕೆ ಹೊಂದಿಕೊಳ್ಳುವುದು ಎಕ್ಸೈಟಿಂಗ್ ಆಗಿರುತ್ತದೆ. ನಾನು ಪಾತ್ರವನ್ನೇ ಜೀವಿಸಲು ಯತ್ನಿಸುತ್ತೇನೆ. ಸಣ್ಣ ಪಾತ್ರವಾದರೂ ತೂಕವಿರಬೇಕು, ಗಟ್ಟಿ ಪಾತ್ರವಾಗಿರಬೇಕು.
* ತಮಿಳು, ತೆಲುಗಿಗೆ ಹೋಲಿಸಿದರೆ ಇಲ್ಲಿ ಸಂಭಾವನೆ ಕಡಿಮೆಯಲ್ಲವೇ?
- ಹೌದು, ತಮಿಳು ಮತ್ತು ತೆಲುಗಿಗೆ ಹೋಲಿಸಿದರೆ ಕನ್ನಡದಲ್ಲಿ ಹೆಚ್ಚು ಸಂಭಾವನೆ ಇಲ್ಲ. ಹಾಗೇ ನನ್ನ ಅಪ್ಪ, ಅಮ್ಮ, ಪತಿ ಯಾರೂ ನನ್ನ ಸಂಪಾದನೆ ಅವಲಂಬಿಸಿಲ್ಲ. ನನ್ನ ಗಳಿಕೆಯನ್ನು ನಾನೇ ಖರ್ಚು ಮಾಡುತ್ತೇನೆ. ಹೀಗಾಗಿಯೇ ನನಗೆ ನಾನು ಸಂಭಾವನೆಗೆ ಹೆಚ್ಚು ಪ್ರಾಮುಖ್ಯ ನೀಡುವುದಿಲ್ಲ. ಪಾತ್ರ ಚೆನ್ನಾಗಿದ್ದರೆ ಸಾಕು. ಈಗೀಗ ಕನ್ನಡದಲ್ಲಿ ಉತ್ತಮ ಅವಕಾಶಗಳು ಸಿಗುತ್ತಿರುವ ಕಾರಣ ಇಲ್ಲೇ
* ಶೂಟಿಂಗ್ಗೆ ಹೊರರಾಜ್ಯಗಳಿಗೆ ಹೋದಾಗ ಕುಟುಂಬ, ಸಮಯವನ್ನು ಹೇಗೆ ಮ್ಯಾನೇಜ್ ಮಾಡುತ್ತೀರಿ?
- ನನಗೆ ಟ್ರಾವೆಲ್ ಮಾಡುವುದು ಇಷ್ಟ. ಕುಟುಂಬದ ಸಪೋರ್ಟ್ ತುಂಬ ಚೆನ್ನಾಗಿದೆ. ಅನೂಪ್ ಸೀಳಿನ್ ಸ್ಟುಡಿಯೋ ಮನೆಯಲ್ಲೇ ಇದೆ. ನಾನು ಶೂಟಿಂಗ್ ಹೋದಾಗ ಅವರು ಮತ್ತು ಅತ್ತೆ ಮಗಳನ್ನು ನೋಡಿಕೊಳ್ಳುತ್ತಾರೆ. ನನ್ನ ಅಪ್ಪ, ಅಮ್ಮ ಕೂಡ ಬೆಂಗಳೂರಿನಲ್ಲೇ ಇರುವುದು. ಕೆಲವೊಮ್ಮೆ ನಮ್ಮ ಜವಾಬ್ದಾರಿ ಬಿಟ್ಟು ಬರುತ್ತಿದ್ದೀನಾ ಅಂತನ್ನಿಸುತ್ತದೆ. ಕೆಲವೊಮ್ಮೆ ನಮಗಾಗಿ ನಾವು ಯಾವಾಗ ಬಾಳುವುದು ಅಂತನೂ ಅನ್ನಿಸುತ್ತದೆ. ಇಲ್ಲಿಯವರೆಗೂ ಕೆಲಸ ಮಾಡಿರುವ ಎಲ್ಲ ನಿರ್ಮಾಣ ಸಂಸ್ಥೆಗಳೂ ಸಪೋರ್ಟಿವ್ ಆಗಿದ್ದವು. 30 ದಿನಗಳ ಸತತ ಶೂಟಿಂಗ್ ಅಂತ ಅಗ್ರೀಮೆಂಟ್ ಮಾಡಿಸಿಕೊಂಡಿದ್ದರೂ ಎಮರ್ಜೆನ್ಸಿ ಅಂತ ಕೇಳಿದಾಗ ಹೋಗಬೇಡಿ ಅಂದಿಲ್ಲ.