ಪ್ರಮುಖ ಮುಖ್ಯಾಂಶಗಳು
ಕನ್ನಡದ ‘ಕೇರ್ ಆಫ್ ಫುಟ್‌ಪಾತ್ 2’, ‘ನಟಸಾರ್ವಭೌಮ’ ಸೇರಿ ಹಿಂದಿ, ತೆಲುಗು ಚಿತ್ರಗಳಲ್ಲಿ ನಟಿಸಿರುವ ಅವಿಕಾ ಗೋರ್‌ಗೆ ಇತ್ತೀಚೆಗೆ ಡೆಂಘೆ ಜ್ವರ ಕಾಣಿಸಿಕೊಂಡಿದೆ. ಐದಾರು ದಿನಗಳ ನಿರಂತರ ಶೂಟಿಂಗ್ ಒತ್ತಡದಿಂದ ನಟಿಗೆ ಆಯಾಸವಾಗಿತ್ತಂತೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಡೆಂಘೆ ಇರುವುದು ದೃಢಪಟ್ಟಿದೆ. ಸದ್ಯ ನಟಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಅವಿಕಾ ಪತಿ ಮಿಲಿಂದ್ ಚಾಂದ್ವಾನಿ, ನಟಿಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ‘ಬಾಕಿಯಿದ್ದ ಎರಡು ದಿನಗಳ ಶೂಟಿಂಗ್‌ಅನ್ನು ಆಕೆ ಒಂದೇ ದಿನದಲ್ಲಿ ಮುಗಿಸಿಕೊಟ್ಟಿದ್ದಳು. ಕೆಲಸದ ಒತ್ತಡದಿಂದಾಗಿ ಜ್ವರ ಕಾಣಿಸಿಕೊಂಡಿತ್ತು. ಆ ಮಧ್ಯೆಯೂ ಅವಿಕಾ ಕೆಲಸ ಮಾಡಿದ್ದಳು. ಅಲ್ಲಿಂದ ಬಂದ ಬಳಿಕ ಎರಡು ದಿನ ವಿಶ್ರಾಂತಿ ಪಡೆದು ಮತ್ತೆ ದೆಹಲಿಗೆ ತೆರಳಿ ಜಾಹೀರಾತಿನ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಳು. ಅಲ್ಲಿಂದ ವಾಪಸ್ಸಾದ ಬಳಿಕ ಶುಕ್ರವಾರ ರಾತ್ರಿ ಆವಿಕಾಗೆ 103ರಿಂದ 104 ಡಿಗ್ರಿ ಜ್ವರವಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದೆವು. ಡೆಂಘೆ ಇರುವುದು ಖಚಿತವಾಗಿದೆ. ಅನಾರೋಗ್ಯವಿದ್ದಾಗ ಶೂಟಿಂಗ್ ಮುಂದೂಡಬಹುದಲ್ಲವೇ ಎಂದು ನಾನು ಅವಿಕಾಗೆ ಸಲಹೆ ನೀಡಿದ್ದೆ. ಆದರೆ, ಆಕೆ ಅದನ್ನು ನಿರಾಕರಿಸಿ, ನಮಗಾಗಿ ನಿರ್ಮಾಪಕರು ಹಣ ಹಾಕಿರುತ್ತಾರೆ. ಎಷ್ಟೇ ಕಷ್ಟವಾಗಲಿ ನ್ಯಾಯ ಒದಗಿಸಬೇಕು ಎಂದು ಶೂಟಿಂಗ್‌ಗೆ ತೆರಳಿದ್ದಳು’ ಎಂದಿದ್ದಾರೆ. ಇತ್ತೀಚೆಗಷ್ಟೇ ಅವಿಕಾ ಗೋರ್ ‘ಬಾಲಿಕಾ ವಧು’ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುವ ಸುಳಿವು ನೀಡಿದ್ದರು.-ಏಜೆನ್ಸೀಸ್