'ಶಾಂತಿ ಕ್ರಾಂತಿ' ಶೂಟಿಂಗ್ ಸಮಯದಲ್ಲಿ ಹೇಳಿದಂತೆ ನಡೆದುಕೊಂಡ ರವಿಮಾಮ
- 1991ರಲ್ಲಿ ತೆರೆಕಂಡ ಅಂದಿನ ಪ್ಯಾನ್ ಇಂಡಿಯಾ ಚಿತ್ರ ಶಾಂತಿ ಕ್ರಾಂತಿ
- ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿನಯದ ಸಿನಿಮಾಗೆ ಈಗ ಸಖತ್ ಡಿಮಾಂಡ್
- ಈ ಚಿತ್ರವನ್ನು ರೀ-ರಿಲೀಸ್ ಮಾಡುವಂತೆ ಕನ್ನಡ ಚಿತ್ರಪ್ರೇಮಿಗಳಿಂದ ಒತ್ತಾಯ
ಬೆಂಗಳೂರು: 1991ರಲ್ಲಿ ರಿಲೀಸ್ ಆದ ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್, ನಟ ವಿ. ರವಿಚಂದ್ರನ್ ಅಭಿನಯದ ಪ್ಯಾನ್ ಇಂಡಿಯಾ 'ಶಾಂತಿ ಕ್ರಾಂತಿ' ಚಿತ್ರವನ್ನು ಮತ್ತೊಮ್ಮೆ ತೆರೆಗೆ ತರುವಂತೆ ಕನ್ನಡ ಚಿತ್ರಪ್ರೇಮಿಗಳು ಪಟ್ಟು ಹಿಡಿದಿದ್ದು, ಇದೇ ಆಗಸ್ಟ್ 15ರಂದು ಬಿಡುಗಡೆಗೊಳಿಸುವಂತೆ ಚಿತ್ರತಂಡಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹಾಡು, ತುಣುಕುಗಳನ್ನು ಟ್ರೆಂಡ್ ಮಾಡುವ ಮೂಲಕ ರೀ-ರಿಲೀಸ್ಗೆ ಡಿಮಾಂಡ್ ಮಾಡಿದ್ದಾರೆ. ಇದೇ ಸಮಯದಲ್ಲಿ, ಮತ್ತೊಂದು ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.
ರವಿಚಂದ್ರನ್, ತಮಿಳಿನ ರಜಿನಿಕಾಂತ್, ತೆಲುಗಿನ ನಾಗಾರ್ಜುನ್, ಜುಹಿ ಚಾವ್ಲಾ, ರಮೇಶ್ ಅರವಿಂದ್, ಖುಷ್ಬೂ ಸುಂದರ್, ಅನಂತ್ ನಾಗ್, ಅನು ಪ್ರಭಾಕರ್, ರೋಹಿಣಿ, ಶ್ರೀನಾಥ್, ಶಿವರಾಂ ಸೇರಿದಂತೆ ಮುಂತಾದ ಹಿರಿಯ ಸೂಪರ್ಸ್ಟಾರ್ ನಟರು ಅಭಿನಯದ ಈ ಚಿತ್ರವು ಇಂದಿನ ಪ್ಯಾನ್ ಇಂಡಿಯಾ ಕಲ್ಪನೆಯನ್ನು ಅಂದೇ ಮಾಡಿದ್ದು ಇಂದಿಗೂ ಇತಿಹಾಸ. ದೊಡ್ಡ ಸ್ಟಾರ್ಗಳ ಸಮಾಗಮ ಹಾಗೂ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲು ತಯಾರಾದ ಶಾಂತಿ ಕ್ರಾಂತಿ, ಅಂದಿನ ಮಟ್ಟಿಗೆ ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವಂತ ಗಳಿಕೆ ಕಾಣಲಿಲ್ಲ. ಜತೆಗೆ ಹೆಚ್ಚಿನ ಜನರಿಗೆ ತಲುಪಬೇಕಿದ್ದ ಕಥೆಯು, ರವಿಚಂದ್ರನ್ ಅವರ ಎಲ್ಲ ಲೆಕ್ಕಾಚಾರಗಳು ಉಲ್ಟಾ ಹೊಡೆಯುವಂತೆ ಮಾಡಿದ್ದು ದುರಂತ.
ಈ ಬಗ್ಗೆ ಹಳೆಯ ಸಂದರ್ಶನಗಳಲ್ಲಿ ಸಾಕಷ್ಟು ಬೇಸರ ತೋಡಿಕೊಂಡಿರುವ ಕ್ರೇಜಿಸ್ಟಾರ್, ಶಾಂತಿ ಕ್ರಾಂತಿ ಚಿತ್ರವನ್ನು ಭಾರಿ ಬಜೆಟ್ ಹಾಗೂ ದೊಡ್ಡ ತಾರಾಬಳಗವನ್ನು ಹಾಕಿಕೊಂಡು ಮಾಡಿದಂತ ಪ್ಯಾನ್ ಇಂಡಿಯಾ ಸಿನಿಮಾ. ಚಿತ್ರೀಕರಣದ ಸಮಯದಲ್ಲೇ ಎಲ್ಲೋ ಮಿಸ್ ಹೊಡೆಯುತ್ತಿದೆ ಎಂದು ತಂದೆಯ ಬಳಿ ಹೇಳಿಕೊಂಡಿದ್ದ ರವಿಚಂದ್ರನ್, ಈ ಪ್ರಾಜೆಕ್ಟ್ ಅರ್ಧಕ್ಕೆ ಬಿಡಲು ನಿರ್ಧರಿಸಿದ್ದರು. ಆದರೆ, ಬಿಗ್ ಸ್ಟಾರ್ಗಳು ಕೊಟ್ಟಿರುವ ಸಮಯಕ್ಕೆ ನ್ಯಾಯ ಒದಗಿಸಬೇಕು ಎಂಬ ತಂದೆಯ ಮಾತಿನ ಬೆನ್ನಲ್ಲೇ ಶೂಟಿಂಗ್ ಮುಗಿಸಿ, ಚಿತ್ರವನ್ನು ರಿಲೀಸ್ ಮಾಡಿದ್ದಾಗಿ ತಿಳಿಸಿದ್ದಾರೆ. ಆದ್ರೆ, ಅಂತಿಮವಾಗಿ ಗೆಲುವು ನೋಡಬೇಕಿದ್ದ ಸಿನಿಮಾ ಸೋಲು ಕಂಡಿದ್ದು ಅವರ ಬೇಸರಕ್ಕೆ ಕಾರಣವಾಯಿತು. ಅಂದು ಜನರಿಗೆ ತಿಳಿಯುವ ಮುನ್ನವೇ ಮರೆಯಾಗಿದ್ದ ಚಿತ್ರವು ಈಗ ದಿಢೀರ್ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು, ಮೊದಲ ಪ್ಯಾನ್ ಇಂಡಿಯಾ ಫಿಲಂ ಈಗ ರೀ-ರಿಲೀಸ್ ಆಗಬೇಕು, ಅದನ್ನು ನಾವೆಲ್ಲರೂ ಸೇರಿ ಗೆಲ್ಲಿಸೋಣ ಎಂಬ ಕೂಗುಗಳು ಜೋರಾಗಿವೆ.
ಇದೇ ಸಂದರ್ಭದಲ್ಲಿ, ನಟ ಮಾಸ್ಟರ್ ಆನಂದ್ ಕೂಡ ಒಂದು ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೀವೆಲ್ಲರೂ ಶಾಂತಿ-ಕ್ರಾಂತಿ ಬಗ್ಗೆ ಮಾತನಾಡಿ, ಬೆಂಬಲ ಕೊಡಿ ಎಂದು ಹೇಳುತ್ತಿದ್ದೀರಿ. ಖಂಡಿತ, ನಮ್ಮ ಸಿನಿಮಾಗೆ ಮಾಡದಿದ್ದರೆ ಹೇಗೆ? ನೀವು ಹೇಳದೆ ಹೋದರೂ ಅದು ನಮ್ಮದೊಂದು ಜವಾಬ್ದಾರಿ. ನೀವೆಲ್ಲರೂ ನನ್ನನ್ನು ಹೇಗೆ ಟ್ಯಾಗ್ ಮಾಡುತ್ತಿದ್ದೀರೋ, ಹಾಗೆ ಆ ಚಿತ್ರದಲ್ಲಿ ನಟಿಸಿದ ಮತ್ತೊಬ್ಬ ನಟಿ ಕಮಲಿ ಅವರನ್ನು ಟ್ಯಾಗ್ ಮಾಡಿ ಎಂದರು.
'ಯಾರೇ ನೀನು ಚೆಲುವೆ' ಚಿತ್ರದ ಹೀರೋಯಿನ್ ಕಮಲಿ ಅವರು ನೀವು ನನ್ನನ್ನು ಟ್ಯಾಗ್ ಮಾಡುವ ಶಾಂತಿ ಕ್ರಾಂತಿ ಸಿನಿಮಾ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ನಟಿ ಸಂಗೀತಾ ಅವರು ಈಗ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಕುತೂಹಲಕಾರಿ ವಿಷಯ ಏನಂದರೆ, ಆಕೆ ಆಗಲೇ ಶಾಂತಿ ಕ್ರಾಂತಿ ಮಾಡುವಾಗ ರವಿ ಸರ್ ಬಳಿ ಹೋಗಿ, ನನ್ನನ್ನು ನೀವು ನಾಯಕ ನಟಿಯಾಗಿ ಮಾಡೋದಿಲ್ವಾ ಎಂದು ನೇರವಾಗಿ ಕೇಳಿದ್ದರು. ಅದಕ್ಕೆ ಉತ್ತರಿಸಿದ ರವಿಚಂದ್ರನ್ ಸರ್, ನಿನಗೆಷ್ಟೇ ವಯಸ್ಸು ಇವಾಗ? ಎಂದರು.
ಸರಿ ಈಗ ನಿನಗೆ 8 ವರ್ಷ ಅಲ್ವಾ? ಇನ್ನು ಎಂಟು ವರ್ಷ ಬಿಟ್ಟು ಬಾ, ನಿನ್ನನ್ನು ಹೀರೋಯಿನ್ ಮಾಡುತ್ತೀನಿ ಅಂತ ಹೇಳಿದ್ರು. ನೋಡಿ ಆ ಮಾತು ಎಷ್ಟು ನಿಜವಾಯ್ತು ಅಂದ್ರೆ, ಶಾಂತಿ ಕ್ರಾಂತಿ 1991ರಲ್ಲಿ ರಿಲೀಸ್ ಆಯ್ತು. ಅದೇ 8 ವರ್ಷ ಅಂದರೆ 1998ರಲ್ಲಿ ಯಾರೇ ನೀನು ಚೆಲುವೆ ಬಿಡುಗಡೆಯಾಯಿತು. ಅಲ್ಲಿಂದ 8 ವರ್ಷಕ್ಕೆ ಅವರು ಸುಮಾರು 15ರಿಂದ 16 ವಯಸ್ಸಿನ ಹುಡುಗಿ ಅಂದುಕೊಳ್ತೀನಿ. ಇದೊಂದು ಇಂಟ್ರೆಸ್ಟಿಂಗ್ ಫ್ಯಾಕ್ಟ್. ಆಲ್ ದಿ ಬೆಸ್ಟ್ ಟು ಶಾಂತಿ ಕ್ರಾಂತಿ ಎಂದು ಮಾಸ್ಟರ್ ಆನಂದ್ ಅವರು ಹೇಳಿದ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಹಲವರ ಕುತೂಹಲಕ್ಕೆ ಕಾರಣವಾಗಿದೆ.