ನೆಗೆಟಿವ್ ರಿವ್ಯೂಗಳ ಸುಳಿಯಲ್ಲಿರುವ ಯಶ್ 'ಟಾಕ್ಸಿಕ್' ಬಗ್ಗೆ ಕಿಚ್ಚ ಸುದೀಪ್ ಓಪನ್ ಟಾಕ್ | Toxic Movie
- ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ
- 600 ಕೋಟಿ ರೂ. ಬಿಗ್ ಬಿಜೆಟ್ನಲ್ಲಿ ತಯಾರಾದ ಈ ಚಿತ್ರವನ್ನು ಆವರಿಸಿದ ನೆಗೆಟಿವ್ ರಿವ್ಯೂ ಎಂಬ ಪೆಡಂಭೂತ
- ಈ ಸಮಯದಲ್ಲಿ ಯಶ್ ಬೆನ್ನಿಗೆ ನಿಂತ ಕನ್ನಡದ ಮತ್ತೊಬ್ಬ ಸ್ಟಾರ್ ಹೀರೋ
Toxic Movie: ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೂ ಭಾರಿ ಪರ-ವಿರೋಧ ಚರ್ಚೆಗೆ ಗುರಿಯಾಗಿದೆ. 600 ಕೋಟಿ ರೂ. ಬಿಗ್ ಬಿಜೆಟ್ನಲ್ಲಿ ತಯಾರಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸುವುದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ರಿವ್ಯೂ, ಟೀಕೆಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಕನ್ನಡದ ಮತ್ತೊಬ್ಬ ಸ್ಟಾರ್ ಹೀರೋ, ನಟ ಕಿಚ್ಚ ಸುದೀಪ ಅವರು ಇದೀಗ ಯಶ್ ಅವರ ಬೆನ್ನಿಗೆ ನಿಂತಿದ್ದು, ಸಿನಿಮಾ ಕುರಿತಂತೆ ಒಂದಷ್ಟು ವಿಷಯಗಳನ್ನು ನೇರವಾಗಿಯೇ ಹೇಳಿದ್ದಾರೆ.
ಆ.26ರಂದು ಪ್ಯಾನ್ ವರ್ಲ್ಡ್ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ತೆರೆಕಂಡ ಟಾಕ್ಸಿಕ್ ಚಿತ್ರವು ಮೊದಲ ದಿನವೇ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಕಂಡಿತು. ಆರಂಭಿಕ ಹಂತದಲ್ಲೇ 101 ಕೋಟಿ ರೂ. ಬಾಚಿಕೊಂಡಿತು. ಆದರೆ, ಎರಡನೇ ಮತ್ತು ಮೂರನೇ ದಿನದಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದು, ಮಂದಗತಿಯಲ್ಲಿ ಸಾಗುತ್ತಿದೆ. ಇದು ಚಿತ್ರತಂಡಕ್ಕೆ ಸಾಮಾನ್ಯ ಸಂಗತಿಯಾದರೆ, ಅತ್ತ ಚಿತ್ರಕ್ಕೆ ಸಂಬಂಧಿಸಿದಂತೆ ಹರಿದುಬರುತ್ತಿರುವ ನೆಗೆಟಿವ್ ವಿಮರ್ಶೆಗಳು, ಟೀಕೆಗಳು ಸಿನಿಮಾಗೆ ದೊಡ್ಡ ಪೆಟ್ಟು ನೀಡಿದೆ. ಇದರಿಂದ ಚಿತ್ರದ ತಯಾರಕರಿಗೆ ಇಲ್ಲದ ಸಮಸ್ಯೆಗಳು ಬೆನ್ನಿಗಂಟಿವೆ.
ಗೀತು ಮೋಹನ್ದಾಸ್ ನಿರ್ದೇಶನದಲ್ಲಿ ಅರಳಿದ ಟಾಕ್ಸಿಕ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಯಶ್ ಪ್ರೇಕ್ಷಕರನ್ನು ಮೋಡಿ ಮಾಡಿದ್ದು, ನೋಡುಗರನ್ನು ತಮ್ಮ ಅಮೋಘ ಅಭಿನಯದಿಂದ ಸೆಳೆದಿದ್ದಾರೆ. ಮತ್ತೊಂದೆಡೆ, ನೆಗೆಟಿವ್ ರಿವ್ಯೂಗಳಿಂದ ತುಂಬುತ್ತಿರುವ ಜಾಲತಾಣಗಳಿಂದ ಸಿನಿಮಾಗೆ ಪರೋಕ್ಷವಾಗಿ ತೊಂದರೆ ಆಗುತ್ತಿರುವ ಚಿತ್ರತಂಡ ಮತ್ತು ಅನೇಕ ಚಿತ್ರಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಟಾಕ್ಸಿಕ್ ನೋಡಿದ ಕಿಚ್ಚ ಸುದೀಪ್ ಅವರು, ಯಶ್ ಅವರ ಸಿನಿಮಾ ಹೇಗಿದೆ ಎಂಬುದನ್ನು ಎಂದಿನಂತೆ ತಮ್ಮ ಶೈಲಿಯಲ್ಲಿ ಖಡಕ್ ಆಗಿ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ, "ನಿಮ್ಮ ಹಿಂದಿನ ಬ್ಲಾಕ್‌ಬಸ್ಟರ್ ಸಿನಿಮಾದ ಸಕ್ಸಸ್ ಬಳಸಿಕೊಂಡು, ಎಲ್ಲರೂ ನಿರೀಕ್ಷಿಸುವಂತಹ ಅದೇ ಹಳೆಯ ಫಾರ್ಮುಲದಲ್ಲಿ ಹೋಗದೆ, ಅತ್ಯಂತ ಧೈರ್ಯದಿಂದ ಔಟ್ ಆಫ್ ದಿ ಬಾಕ್ಸ್ ಚಿಂತಿಸಿ, ಹೊಸ ಪ್ರಯೋಗ ಮಾಡಲು ಪ್ರಯತ್ನಿಸಿದ್ದೀರಲ್ಲ ಯಶ್ (@TheNameIsYash) ಇದನ್ನು ಮೆಚ್ಚಲೇಬೇಕು. ಈ ರೀತಿಯ ವಿಭಿನ್ನ ಪ್ರಯತ್ನ ಮಾಡಲು ಕೇವಲ ಕಲ್ಪನೆ ಇದ್ದರೆ ಸಾಲದು; ಪ್ರತ್ಯೇಕ ಮನಸ್ಥಿತಿ, ದೃಢ ನಂಬಿಕೆ ಮತ್ತು ಮುಖ್ಯವಾಗಿ ಗಟ್ಸ್ ಇರಬೇಕು ಎಂದಿದ್ದಾರೆ.
#Toxic ಚಿತ್ರವು ನಿಜಕ್ಕೂ ಒಂದು ವಿಶಿಷ್ಟ ಹಾಗೂ ಶ್ಲಾಘನೀಯ ಪ್ರಯತ್ನ. ಸಿನಿಮಾದಲ್ಲಿನ ಹಲವು ಭಾಗಗಳು ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸುವುದಲ್ಲದೆ, ಚರ್ಚೆ, ಸಂವಾದ ಮತ್ತು ಕಲಿಕೆಗೆ ಜಾಗ ಮಾಡಿಕೊಟ್ಟಿದೆ. ಹಳೆಯ ಸಾಂಪ್ರದಾಯಿಕ ಶೈಲಿಯಿಂದ ಹೊರಬಂದು ಇಂತಹ ಹೊಸ ಸಾಹಸಕ್ಕೆ ಕೈಹಾಕಿದ್ದಕ್ಕಾಗಿ ನನ್ನ ಮೆಚ್ಚುಗೆ. ಒಳ್ಳೆಯದಾಗಲಿ ಗೆಳೆಯ ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಸುದೀಪ್ ಅವರ ಟ್ವೀಟ್ ಹೊರಬೀಳುತ್ತಿದ್ದಂತೆ, ಅನೇಕರು ಟಾಕ್ಸಿಕ್ ಬಗ್ಗೆ ಕೇಳಿಬರುತ್ತಿರುವ ನೆಗೆಟಿವ್ ರಿವ್ಯೂ, ವಿಚಾರಕ್ಕೆ ಕಿಡಿಕಾರಿದ್ದಾರೆ.