ನಟ, ನಿರ್ದೇಶಕ ಎಂ.ಜಿ. ಶ್ರೀನಿವಾಸ್ 2023ರ "ಘೋಸ್ಟ್' ಬಳಿಕ "ಬೀರ್ಬಲ್ 2' ಘೋಷಿಸಿದ್ದರು. 2019ರಲ್ಲಿ ಶ್ರೀನಿ ನಟಿಸಿ, ನಿರ್ದೇಶಿಸಿದ್ದ ಲೀಗಲ್ ಕಾಮಿಡಿ ಥ್ರಿಲ್ಲರ್ ಚಿತ್ರದ ಮೂಲಕ ರುಕ್ಮಿಣಿ ವಸಂತ್ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. "ಬೀರ್ಬಲ್' ಮೂರು ಚಿತ್ರಗಳ ಸರಣಿಯಾಗಿದ್ದು, ಮೊದಲ ಭಾಗಕ್ಕೆ ಫೈಂಡಿಂಗ್ ವಜ್ರಮುನಿ' ಎಂದು ಶೀರ್ಷಿಕೆ ಇಡಲಾಗಿತ್ತು. ಇದೀಗ ಏಳು ವರ್ಷಗಳ ಬಳಿಕ "ಬೀರ್ಬಲ್ 2: ಅವರನ್ನ ಬಿಟ್, ಇವರನ್ನ ಬಿಟ್, ಅವರ್ಯಾರು?' ತೆರೆಗೆ ಬರಲು ರೆಡಿಯಾಗಿದೆ. ವಿಶೇಷ ಅಂದರೆ 20ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಖುಷ್ಬೂ "ನಾನಲ್ಲ" (2011) ಬಳಿಕ ಮತ್ತೆ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗೇ 2012ರ "ಕ್ರೇಜಿ ಲೋಕ' ನಂತರ ಡೈಸಿ ಬೋಪಣ್ಣ ಕೂಡ ಕನ್ನಡದಲ್ಲಿ ನಟಿಸಿಲ್ಲ. ಹೀಗಾಗಿ 15 ವರ್ಷಗಳ ನಂತರ ಖುಷ್ಬೂ, 14 ವರ್ಷಗಳ ಬಳಿಕ ಡೈಸಿ ಕನ್ನಡಕ್ಕೆ ಕಮ್ಬ್ಯಾಕ್ ಮಾಡುತ್ತಿರುವ ಕಾರಣ "ಬೀರ್ಬಲ್ 2' ಕುತೂಹಲ ಹೆಚ್ಚಿಸಿದೆ. ಹಾಗೇ "ಅರಸನ್', "ಟೂರಿಸ್ಟ್ ಫ್ಯಾಮಿಲಿ' ಖ್ಯಾತಿಯ ತಮಿಳು ನಟಿ ಯೋಗಲಕ್ಷ್ಮೀ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿಗೆ "ಬೀರ್ಬಲ್' ಸೀಕ್ವೆಲ್ ಬಗ್ಗೆ ಮಾಹಿತಿ ನೀಡಿದ ಎಂಜಿ ಶ್ರೀನಿ, "ಈ ಸೀಕ್ವೆಲ್ನಲ್ಲಿ ಹೊಸ ಕೇಸ್ ಕುರಿತ ಕಥೆ ಹೇಳಲಿದ್ದೇವೆ. ಬೆಂಗಳೂರಿನಲ್ಲೇ ಪೂರ್ತಿ ಚಿತ್ರೀಕರಣ ಮಾಡಿದ್ದು, ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದೆ. ಪೋಸ್ಟ್&ಪ್ರೊಡಕ್ಷನ್ ಕಾರ್ಯಗಳೂ ಮುಗಿದಿದ್ದು, ಸದ್ಯ ಸೆನ್ಸಾರ್ಗೆ ರೆಡಿಯಾಗಿದ್ದೇವೆ. ಇದೇ ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ.
ಶ್ರೀನಿ ಯೂನಿವರ್ಸ್
"ಬೀರ್ಬಲ್' ಚಿತ್ರದಲ್ಲಿ ಲಾಯರ್ ಮಹೇಶ್ ಪಾತ್ರದಲ್ಲಿ ಶ್ರೀನಿ ನಟಿಸಿದ್ದರು. ಅದೇ ಪಾತ್ರದಲ್ಲಿ "ಘೋಸ್ಟ್' ಸಿನಿಮಾದಲ್ಲೂ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಇನ್ನು "ಘೋಸ್ಟ್' ಚಿತ್ರದಲ್ಲಿ ದಳವಾಯಿ ಮುದ್ದಣ್ಣ ಅಲಿಯಾಸ್ ಬಿಗ್ ಡ್ಯಾಡಿ ಹಾಗೂ ಆನಂದ್ ರಾವ್ ಹೀಗೆ ದ್ವಿಪಾತ್ರಗಳಲ್ಲಿ ಶಿವಣ್ಣ ನಟಿಸಿದ್ದರು. ಇದೀಗ "ಬೀರ್ಬಲ್ 2'ನಲ್ಲಿ ಶಿವಣ್ಣ "ಬಿಗ್ ಡ್ಯಾಡಿ'ಯಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ "ಘೋಸ್ಟ್ 2', "ಬೀರ್ಬಲ್ 3', "ದಳವಾಯಿ' ಚಿತ್ರಗಳನ್ನೂ ಈಗಾಗಲೇ ಘೋಷಿಸಲಾಗಿದ್ದು, ಒಂದು ಚಿತ್ರದ ಪಾತ್ರ ಇನ್ನೊಂದು ಚಿತ್ರದಲ್ಲಿ ಮುಂದುವರಿಯಲಿದೆ.
ಎ ಫಾರ್ ಆನಂದ್ನಲ್ಲಿ, ಎಂ ಫಾರ್ ಮಾಧುರಿ?
ಈ ಯೂನಿವರ್ಸ್ ಅಲ್ಲದೇ ಶ್ರೀನಿವಾಸ್ ಮತ್ತು ಶಿವರಾಜಕುಮಾರ್ ಕಾಂಬಿನೇಷನ್ನಲ್ಲಿ "ಎ ಫಾರ್ ಆನಂದ್' ಸಿನಿಮಾ ಮುಹೂರ್ತ ಕಳೆದ ವರ್ಷ ನೆರವೇರಿತ್ತು. ಇದೀಗ ಚಿತ್ರದ ನಾಯಕಿಯ ಆಯ್ಕೆ ನಡೆಯುತ್ತಿದ್ದು, ತಂಡ ಬಾಲಿವುಡ್ ನಟಿ ಮಾಧುರಿ ದೀತ್ರನ್ನು ಸಂಪರ್ಕಿಸಿದೆಯಂತೆ. "ಮಾಧುರಿ ಅವರನ್ನು ಸಂಪರ್ಕಿಸಿರುವುದು ನಿಜ. ಆದರೆ, ಇನ್ನೂ ಕಥೆ ಹೇಳಿಲ್ಲ. ಮಾತುಕತೆಯೂ ಪ್ರಾರಂಭವಾಗಿಲ್ಲ. ಎಲ್ಲ ಓಕೆ ಆದ ಬಳಿಕವಷ್ಟೇ ನಾನು ಮಾಹಿತಿ ನೀಡಬಲ್ಲೆ. ನಾಯಕಿಯ ಆಯ್ಕೆಯ ಬಳಿಕ ಉಳಿದ ತಾರಾಗಣದ ಆಯ್ಕೆ ಮಾಡಿಕೊಳ್ಳಲಿದ್ದೇವೆ. ಸೆಪ್ಟೆಂಬರ್ನಲ್ಲಿ "ಎ ಾರ್ ಆನಂದ್' ಶೂಟಿಂಗ್ ಪ್ರಾರಂಭಿಸಲಿದ್ದೇವೆ, ಅಷ್ಟರಲ್ಲಿ ಎಲ್ಲ ಫೈನಲ್ ಆಗಲಿದೆ' ಎನ್ನುತ್ತಾರೆ ಶ್ರೀನಿ.