ಭುವನ್ ಪೊನ್ನಣ್ಣ 
ಸ್ಯಾಂಡಲ್‌ವುಡ್

ನಗಿಸಲು ಸಜ್ಜಾದ ಭುವನ್ ಪೊನ್ನಣ್ಣ: ‘ಹಲೋ 123’, ‘ಬುಲ್ಲಿ’ ಬೆನ್ನಲ್ಲೇ ಹೊಸ ಚಿತ್ರ ಘೋಷಿಸಿದ ನಟ

ಪ್ರಮುಖ ಮುಖ್ಯಾಂಶಗಳು

  • ಬಿಜಿ ಇರುವಾಗಲೇ ಹೊಸ ಸಿನಿಮಾ ಘೋಷಿಸಿದ ನಟ ಭುವನ್​
  • ಈ ಬಾರಿ ಕಾಮಿಡಿ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ರಾಂಧವ ನಟ
  • ಕಂಟೆಂಟ್ ಸಿನಿಮಾಗಳಿಗೆ ಹೆಚ್ಚು ಒತ್ತು ಸಿಗಬೇಕಿದೆ ಎಂದು ಅಭಿಪ್ರಾಯಪಟ್ಟ ನಟ
ಬೆಂಗಳೂರು: ‘ರಾಂಧವ’, ‘ಪ್ರಣಯ ರಾಜ’ ತೆರೆಕಂಡು ಐದು ವರ್ಷಗಳ ಬಳಿಕ ನಟ ಭುವನ್ ಪೊನ್ನಣ್ಣ ಸ್ಯಾಂಡಲ್‌ವುಡ್‌ಗೆ ಮರಳಿರುವುದು ಗೊತ್ತೇ ಇದೆ. ಸದ್ಯ ಅವರು ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ‘ಹಲೋ 123’ ಹಾಗೂ ‘ಬುಲ್ಲಿ’ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಆ ಬಿಜಿಯ ನಡುವೆಯೂ ಅವರು ಇತ್ತೀಚೆಗೆ ಹೊಸ ಸಿನಿಮಾ ಘೋಷಿಸಿದ್ದಾರೆ. ಇದೊಂದು ಡಾರ್ಕ್ ಹ್ಯೂಮರ್ ಜಾನರ್‌ನ ಚಿತ್ರವಾಗಿದ್ದು, ಅನೂಪ್ ಆ್ಯಂಟನಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ‘ಇತ್ತೀಚೆಗೆ ಕನ್ನಡ ಸಿನಿಮಾಗಳು ಯಾಕೆ ಸಕ್ಸಸ್ ಕಾಣುತ್ತಿಲ್ಲ ಎಂಬುದರ ಬಗ್ಗೆ ಯೋಚಿಸುತ್ತಿದ್ದೆ. ಅದರಲ್ಲಿ ಕಥೆಗೆ ಪ್ರಾಮುಖ್ಯತೆ ನೀಡದ ಕಾರಣಕ್ಕಾಗಿಯೇ ನಾವು ಸೋಲುತ್ತಿದ್ದೇವೆ ಎಂದೆನಿಸಿತು. ಇದೇ ಆಲೋಚನೆಯಲ್ಲಿರುವಾಗಲೇ ಎರಡು-ಮೂರು ಕಥೆ ಕೇಳಿದ್ದೆ. ಅವೆಲ್ಲವೂ ಹೀರೋ-ಹೀರೋಯಿನ್ ಕೇಂದ್ರಿತವಾಗಿದ್ದವು. ಕಂಟೆಂಟ್ ಆಧಾರಿತ ಸಿನಿಮಾಗಳು ಬಂದರೆ ಒಪ್ಪಿಕೊಳ್ಳೋಣ ಎಂದು ತೀರ್ಮಾನಿಸಿದ್ದೆ. ಅದೇ ಸಮಯದಲ್ಲಿ ನಿರ್ದೇಶಕ ಅನೂಪ್ ಆ್ಯಂಟನಿ ಹೇಳಿದ ಕಥೆ ಇಷ್ಟವಾಯಿತು. ಕಥೆ ಕೇಳುವಾಗ ಆರಂಭದಿಂದ ಅಂತ್ಯದವರೆಗೂ ಸಿಕ್ಕಾಪಟ್ಟೆ ನಗಾಡಿದ್ದೆ. ಈವರೆಗೂ ನಾನು ಕಾಮಿಡಿ ಚಿತ್ರದಲ್ಲಿ ನಟಿಸಿಲ್ಲ. ಇಲ್ಲಿ ಡ್ರಾಮಾ, ರೊಮ್ಯಾನ್ಸ್ ಜಾಸ್ತಿ ಇಲ್ಲ. ಬದಲಾಗಿ ಫೀಲ್ ಗುಡ್ ಜತೆಗೆ ನಗಿಸುವ ಪ್ರಯತ್ನ ಮಾಡಲಿದ್ದೇವೆ’ ಎಂದು ಹೇಳಿಕೊಳ್ಳುತ್ತಾರೆ ಭುವನ್. ಇನ್ನಷ್ಟೇ ಚಿತ್ರಕ್ಕೆ ಟೈಟಲ್ ಘೋಷಣೆಯಾಗಬೇಕಿದೆ.

ಕಷ್ಟದ ಕಾಮಿಡಿ ಬೇಕಿದೆ ಟ್ರೇನಿಂಗ್..

ಮೊದಲ ಬಾರಿಗೆ ಕಾಮಿಡಿ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಪಾತ್ರಕ್ಕಾಗಿ ನಡೆಸುತ್ತಿರುವ ಸಿದ್ಧತೆ ಮತ್ತು ಸವಾಲಿನ ಬಗ್ಗೆ ಭುವನ್, ‘ಪಾತ್ರದ ಮೂಲಕ ನಗಿಸುವುದು, ಅಳಿಸುವುದು ತುಂಬಾ ಕಷ್ಟ. ನಾನೀಗ ತೆರೆ ಮೇಲೆ ನಗಿಸಬೇಕು ಎಂದರೆ, ನನಗೆ ನಾನೇ ಬದಲಾಗಬೇಕಿದೆ. ಹಾವಭಾವ, ದೇಹಭಾಷೆ ಹಾಗೂ ಮಾತಿನ ವೈಖರಿಯನ್ನು ಬದಲಿಸಿಕೊಳ್ಳಬೇಕಿದೆ. ಅದಕ್ಕಾಗಿ ಈ ಪಾತ್ರ ಸವಾಲಿನದು. ಪಾತ್ರಕ್ಕಾಗಿ ಇಂಟೆನ್ಸ್ ಟ್ರೇನಿಂಗ್ ಕ್ಲಾಸ್‌ಗೆ ಹೋಗುತ್ತಿದ್ದೇನೆ. ಈಗಾಗಲೇ 12 ದಿನಗಳ ಕ್ಲಾಸ್ ಮುಗಿಸಿದ್ದೇನೆ. ಇದೇ ಜೂನ್ 12ರಿಂದ ಶೂಟಿಂಗ್ ಆರಂಭವಾಗಲಿದ್ದು, 45-50 ದಿನಗಳ ಕಾಲ ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ಚಿತ್ರೀಕರಣ ನಡೆಯಲಿದೆ. ಹೀರೋಯಿನ್‌ಗೆ ಹುಡುಕಾಟ ನಡೆದಿದ್ದು, ಸದ್ಯದಲ್ಲೇ ಅಂತಿಮಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಡಬಲ್ ಸಂಭ್ರಮ

ಭುವನ್ ಪೊನ್ನಣ್ಣ- ಹರ್ಷಿಕಾ ಪೂಣಚ್ಚ ದಂಪತಿ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ‘ಹರ್ಷಿಕಾ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ ನಾನೇ ಹೆಚ್ಚು ಕಾಳಜಿ ವಹಿಸಿದ್ದೆ. ಆದರೆ, ಇದೀಗ ಕೆಲಸ ಹಾಗೂ ಶೂಟಿಂಗ್ ಒತ್ತಡ ಇರುವುದರಿಂದ ಹರ್ಷಿಕಾರತ್ತ ಹೆಚ್ಚು ಗಮನ ಹರಿಸಲಾಗುತ್ತಿಲ್ಲ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ನಮ್ಮ ಕುಟುಂಬಕ್ಕೆ ಖುಷಿಯಿದೆ. ಮಗಳು ತ್ರಿದೇವಿ ಹುಟ್ಟಿದ ಬಳಿಕವೇ ನನ್ನ ಅದೃಷ್ಟ ಬದಲಾಗಿದ್ದು. ಮಕ್ಕಳೆಂದರೆ ನನಗೆ ಪಂಚಪ್ರಾಣ. ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರ ಹೆರಿಗೆಯಾಗುವ ನಿರೀಕ್ಷೆಯಿದೆ’ ಎಂದು ಭುವನ್ ಖುಷಿ ಹಂಚಿಕೊಳ್ಳುತ್ತಾರೆ. ಅಂದಹಾಗೆ, ಈಗಾಗಲೇ ಕಥೆ ರೆಡಿ ಮಾಡಿಕೊಂಡಿರುವ ಭುವನ್ 2027ರಲ್ಲಿ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.