ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ ಅತ್ಯುತ್ತಮ ಕನ್ನಡ ಸಿನಿಮಾ
- 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ
- ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಸೇರಿ 3 ರಾಷ್ಟ್ರೀಯ ಪ್ರಶಸ್ತಿ
ನವದೆಹಲಿ: ಶನಿವಾರ (ಜು.18) ನವದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 72 ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (72nd National Film Awards) ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಪ್ರಶಸ್ತಿಯನ್ನು ಜನವರಿ 2024 ರಿಂದ ಡಿಸೆಂಬರ್ 2024 ರ ಒಳಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯಿಂದ ಪ್ರಮಾಣಪತ್ರವನ್ನು ಪಡೆದ ಸಿನಿಮಾಗಳಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಗಳನ್ನು ಪ್ರದೇಶದ/ಭಾಷಾ ಆಧರದಲ್ಲಿ ನೀಡಿರುವ ಕಾರಣ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳು ಸಹ ಜನಮನ್ನಣೆಯನ್ನು ಪಡಡೆಯುವಂತಾಗಿದೆ.
ಮಿಥ್ಯ ಅತ್ಯುತ್ತಮ ಸಿನಿಮಾ!
ಕನ್ನಡ ವಿಭಾಗದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋಸ್ ನಿರ್ಮಾಣದ, ಸುಮಂತ್ ಭಟ್ ನಿರ್ದೇಶನದ ಮಿಥ್ಯ (Mithya Best Kannada Film) ಎಂಬ ಸಿನಿಮಾ ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಪ್ರಶಸ್ತಿಯನ್ನು ಪಡೆದಿದೆ. ಇದರ ಜೊತೆಗೆ ಇತರೆ ಎರಡು ರಾಷ್ಟ್ರಪ್ರಶಸ್ತಿಗಳು ಈ ಚಿತ್ರಕ್ಕೆ ಲಭಿಸಿದೆ. ಅತ್ಯುತ್ತಮ ಸಿನಿಮಾ ಜೊತೆಗೆ ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ಆತೀಶ್ ಶೆಟ್ಟಿ ಹಾಗೂ ಅತ್ಯುತ್ತಮ ನಟಿ (ಪೋಷಕ ಪಾತ್ರ) ವಿಭಾಗದಲ್ಲಿ ರೂಪಶ್ರಿ ವರ್ಕಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಮ್ಮುಟ್ಟಿ-ಕಾರ್ತಿಕ್ ಅತ್ಯುತ್ತಮ ನಟರು; ಯಾಮಿ ಬೆಸ್ಟ್ ನಟಿ!
ಬ್ರಹ್ಮಯುಗಂ ಸಿನಿಮಾದ ನಟನೆಗಾಗಿ ಮಳಿಯಾಳಂ ನಟ ಮಮ್ಮುಟ್ಟಿಗೆ ಹಾಗೂ ಚಂದು ಚಾಂಪಿಯನ್ ಸಿನಿಮಾಗಾಗಿ ಕಾರ್ತಿಕ್ ಆರ್ಯನ್ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ, ಆರ್ಟಿಕಲ್ 370 ಸಿನಿಮಾದ ಅಭಿನಯಕ್ಕೆ ನಿರ್ದೇಶಕ ಆದಿತ್ಯ ಧರ್ ಪತ್ನಿ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ, (ಏಜನ್ಸೀಸ್).