ಕಿಚ್ಚ ಸುದೀಪ್ 
ಸ್ಯಾಂಡಲ್‌ವುಡ್

ಹೊಸಬರ ಕೈಹಿಡಿದ ಕಿಚ್ಚ : ಟ್ರೇಲರ್, ಟೀಸರ್ ರಿಲೀಸ್ ಮಾಡುವ ಮೂಲಕ ಸುದೀಪ್ ಪ್ರೋತ್ಸಾಹ

ಪ್ರಮುಖ ಮುಖ್ಯಾಂಶಗಳು

  • ಒತ್ತಡ, ಬಿಜಿಯ ನಡುವೆಯೂ ಸುದೀಪ್ ಹೊಸಬರ ಸಿನಿಮಾಗಳಿಗೆ ಸಾಥ್​
  • ‘ಸಿಸಿಎಲ್’ ಆತ್ಮೀಯರ ಚಿತ್ರಕ್ಕೆ ಸುದೀಪ್ ಆತ್ಮೀಯ ಬೆಂಬಲ
  • ಒಂದು ತಿಂಗಳ ಅವಧಿಯಲ್ಲಿ ಒಟ್ಟು ಎಂಟು ಕಾರ್ಯಕ್ರಮ
ಬೆಂಗಳೂರು : (actor sudeep) ನಟ ಸುದೀಪ್ ಸದ್ಯ ತುಂಬಾ ಬಿಜಿಯಾಗಿದ್ದಾರೆ. ಇದೇ ಡಿ.25ಕ್ಕೆ ‘ಮಾರ್ಕ್’ ರಿಲೀಸ್ ಮಾಡಲೇಬೇಕು ಎಂದು ಪಣತೊಟ್ಟಿರುವ ಅವರು ನಿರಂತರ ಶೂಟಿಂಗ್‌ನಲ್ಲಿದ್ದಾರೆ. ಬಹುತೇಕ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ. ಇದರ ನಡುವೆ ನಟನ ಮಹತಾಕಾಂಕ್ಷೆ ಪ್ರಾಜೆಕ್ಟ್ ‘ಬಿಲ್ಲಾ ರಂಗ ಬಾಷಾ’ ಚಿತ್ರೀಕರಣದಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಈ ಎರಡು ಸಿನಿಮಾ ನಡುವೆ ‘ಬಿಗ್‌ಬಾಸ್ ಕನ್ನಡ ಸೀಸನ್ 12ರ’ ನಿರೂಪಕನಾಗಿ ವಾರಾಂತ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇಷ್ಟೆಲ್ಲಾ ಒತ್ತಡ, ಬಿಜಿಯ ನಡುವೆಯೂ ಸುದೀಪ್ ಹೊಸಬರ ಸಿನಿಮಾಗಳ ಟ್ರೇಲರ್, ಟೀಸರ್ ಹಾಗೂ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಗಮಿಸಿ, ಪ್ರೋತ್ಸಾಹಿಸುತ್ತಿದ್ದಾರೆ. ಈಗಾಗಲೇ ಒಂದು ತಿಂಗಳ ಅವಧಿಯಲ್ಲಿ ಒಟ್ಟು ಎಂಟು ಕಾರ್ಯಕ್ರಮಗಳಲ್ಲಿ ಕಿಚ್ಚ ಭಾಗವಹಿಸಿದ್ದಾರೆ.
ಸಿಸಿಎಲ್ ಹುಡುಗರ ಬೆನ್ನೆಲುಬು
ಸುದೀಪ್‌ಗೆ ಅಕ್ಟೋಬರ್ ತಿಂಗಳು ಟೈಟ್ ಶೆಡ್ಯೂಲ್ ಇತ್ತು. ‘ಮಾರ್ಕ್’ ಶೂಟಿಂಗ್ ಭರದಿಂದ ಸಾಗಿತ್ತು. ಜತೆಗೆ ಸೆ.30ಕ್ಕೆ ‘ಬಿಗ್‌ಬಾಸ್ ಕನ್ನಡ’ ಸೀಸನ್ 12’ಗೂ ಚಾಲನೆ ಸಿಕ್ಕಿತ್ತು. ಈ ನಡುವೆಯೂ ಅ.7ರಂದು ಶಿವ ಗಣೇಶ್ ನಿರ್ದೇಶನದ ಹೊಸಬರ ‘ಯಾರಿಗೂ ಹೇಳ್ಬೇಡಿ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ತಂಡಕ್ಕೆ ಬೆಂಬಲವಾಗಿ ನಿಂತಿದ್ದರು. ಹಾಗೆಯೇ ಅದೇ 17ರಂದು ಡಾರ್ಲಿಂಗ್ ಕೃಷ್ಣ ಮತ್ತು ಶಶಾಂಕ್ ಕಾಂಬಿನೇಷನ್‌ನ ‘ಬ್ರ್ಯಾಟ್’ ತಂಡಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟ್ರೇಲರ್ ರಿಲೀಸ್ ಮಾಡಿಕೊಟ್ಟು, ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅದಾದ ಎರಡು ದಿನಕ್ಕೆ ಅ.19ರ ರವಿವಾರ ‘ಬಿಗ್‌ಬಾಸ್’ ಶೋ ನಿರೂಪಣೆ ಮುಗಿಸಿಕೊಂಡವರೇ ನೇರ ಚಂದನ್ ಕುಮಾರ್ ನಟಿಸಿ, ನಿರ್ದೇಶಿಸಿರುವ ಫ್ಲರ್ಟ’ ಟ್ರೇಲರ್ ಬಿಡುಗಡೆಗೆ ಆಗಮಿಸಿದ್ದರು. ಮರುದಿನವೇ ಅಂದರೆ ಅ.20ರಂದು ಕಾರ್ತಿಕ್ ಜಯರಾಮ್ ನಟಿಸಿರುವ ‘ದ ವೀರ್’ ಟೀಸರ್ ಅನಾವರಣಗೊಳಿಸಿದ್ದರು. ಡಾರ್ಲಿಂಗ್ ಕೃಷ್ಣ, ಚಂದನ್, ಕಾರ್ತಿಕ್ ಜಯರಾಮ್ ‘ಸಿಸಿಎಲ್’ನಿಂದಲೂ ಕಿಚ್ಚನ ಜತೆ ಒಡನಾಡಿಗಳಾಗಿದ್ದು, ಆತ್ಮೀಯರ ಚಿತ್ರಕ್ಕೆ ಸುದೀಪ್ ಆತ್ಮೀಯವಾಗಿಯೇ ಬೆಂಬಲಿಸಿದ್ದರು.
ನಿರಂತರ ಕಾರ್ಯಕ್ರಮಗಳು
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗದಲ್ಲಿ 50 ವರ್ಷ ಪೊರೈಸಿದ್ದ ಹಿನ್ನೆಲೆಯಲ್ಲಿ ಅ.23ರಂದು ಕಲಾವಿದರ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುದೀಪ್ ಹಿರಿಯ ನಿರ್ದೇಶಕನನ್ನು ಅಭಿನಂದಿಸಿದ್ದರು. ಮರುದಿನವೇ ಕೆ.ಪಿ. ಶ್ರೀಕಾಂತ್ ನಿರ್ಮಾಣದ ಪ್ರಮೋದ್ ಪಂಜು, ಅಮೃತಾ ಅಯ್ಯಂಗಾರ್ ನಟಿಸುತ್ತಿರುವ ‘ಹಲ್ಕಾ ಡಾನ್’ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಸುದೀಪ್ ಭಾಗಿಯಾಗಿ ಉದಯೋನ್ಮುಖ ನಟನಿಗೆ ಮನದುಂಬಿ ಹಾರೈಸಿದ್ದರು. ಹೀಗೆ ಬಿಜಿ ನಡುವೆಯೂ ಸುದೀಪ್ ಕೇವಲ 20 ದಿನಗಳಲ್ಲಿ, ಆರು ಬೇರೆ ಬೇರೆ ಚಿತ್ರತಂಡಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
‘ಗತವೈಭವ’ಕ್ಕೆ ಸಾಥ್, ಮಾರ್ನಮಿಗೆ ಧ್ವನಿ
ಅಕ್ಟೋಬರ್ ತಿಂಗಳಲ್ಲಿಯೇ ಆರು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕಿಚ್ಚನ ಪರ್ಯಟನೆ ಇನ್ನೂ ನಿಂತಿಲ್ಲ. ಭಾನುವಾರ ಸಂಜೆ ಸಿಂಪಲ್ ಸುನಿ ನಿರ್ದೇಶನದ ದುಷ್ಯಂತ್, ಆಶಿಕಾ ರಂಗನಾಥ್ ಅಭಿನಯದ ‘ಗತವೈಭವ’ ಚಿತ್ರದ ಟ್ರೇಲರ್ ಲಾಂಚ್ ಮಾಡಿ, ಶುಭ ಹಾರೈಸಿದ್ದಾರೆ. ಈ ಚಿತ್ರ ಇದೇ 14ಕ್ಕೆ ರಿಲೀಸ್ ಆಗುತ್ತಿದೆ. ಇನ್ನು ರಿತ್ವಿಕ್ ಮಠದ್, ಚೈತ್ರಾ ಜೆ. ಆಚಾರ್ ಅಭಿನಯದ ‘ಮಾರ್ನಮಿ’ ಟ್ರೇಲರ್‌ಗೆ ಕಿಚ್ಚ ಹಿನ್ನೆಲೆ ಧ್ವನಿ ನೀಡಿ, ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಹೊಸಬರ ಸಿನಿಮಾಗೆ ಸಾಥ್ ನೀಡಿದ್ದಾರೆ.