ಕರೊನಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಸ್ಯಾಂಡಲ್ವುಡ್ ಕೂಡ ಸ್ಪಂದಿಸಿದ್ದು, ‘ಜನತಾ ಕರ್ಫ್ಯೂ’ಗೆ ಹಲವಾರು ನಟ-ನಟಿಯರು ಬೆಂಬಲ ಸೂಚಿಸಿದ್ದಾರೆ. ಕರೊನಾ ಸೋಂಕು ತಗುಲದಂತೆ ಹಾಗೂ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ. 22ರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಮನೆಯೊಳಗೇ ಇದ್ದು ‘ಜನತಾ ಕರ್ಫ್ಯೂ’ ಪಾಲಿಸುವಂತೆ ಪ್ರಧಾನಿ ಮೋದಿ ಗುರುವಾರ ಕರೆ ನೀಡಿದ್ದರು. ದೇಶದ ಜನತೆಯ ಹಿತಕ್ಕಾಗಿ ಅವರು ನೀಡಿರುವ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಅದಕ್ಕೀಗ ತಾರೆಯರೂ ಕೈಜೋಡಿಸಿದ್ದಾರೆ. ಆ ಮೂಲಕ ಅಭಿಮಾನಿಗಳು ‘ಜನತಾ ಕರ್ಫ್ಯೂ’ನಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮುಖೇನ ಕರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಪಾತ್ರ ಕೂಡ ಇರುವಂತಹ ಕೆಲಸವನ್ನು ಚಿತ್ರರಂಗದ ಹಲವರು ಮಾಡುತ್ತಿದ್ದಾರೆ.
ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ
ಭಾನುವಾರ ಮನೆ ಬಿಟ್ಟು ಹೊರಹೋಗದಂತೆ ಪ್ರಧಾನಿ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ನಾವಂತೂ ಮನೆ ಬಿಟ್ಟು ಹೊರಹೋಗಲ್ಲ. ನೀವು ಕೂಡ ಹೋಗಬೇಡಿ, ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳಿ. ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೌರಕಾರ್ವಿುಕರು ಸೇರಿ ಎಲ್ಲರಿಗೂ ಧನ್ಯವಾದ ಸಲ್ಲಿಸಲು ಸಂಜೆ ಐದಕ್ಕೆ ಚಪ್ಪಾಳೆ ತಟ್ಟಿ ಮನೆಯಿಂದಲೇ ಧನ್ಯವಾದ ತಿಳಿಸೋಣ.
ಜಗತ್ತಿನಾದ್ಯಂತ ಕರೊನಾ ವೈರಸ್ನಿಂದಾಗಿ ಜನಜೀವನ ಗಂಭೀರವಾಗಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಸುರಕ್ಷತೆಯ ಜತೆಗೆ ದೇಶದ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಜನತಾ ಕರ್ಫ್ಯೂ ಮನವಿಯನ್ನು ನಾವೆಲ್ಲರೂ ಪಾಲಿಸಿ ನಮ್ಮ ಕುಟುಂಬ ಹಾಗೂ ದೇಶದ ಹಿತಾಸಕ್ತಿಗಾಗಿ ಮನೆಯಲ್ಲೇ ಇದ್ದು ನಮ್ಮ ಕುಟುಂಬವನ್ನು ಕಾಪಾಡಿಕೊಳ್ಳೋಣ. ಈ ದೇಶವನ್ನು ವೈರಸ್ನಿಂದ ಮುಕ್ತಗೊಳಿಸೋಣ.
ಸಾಯ್ತೀವಿ ಅಂತ ಗೊತ್ತು, ಹಾಗಂತ ಸ್ಮಶಾನದಲ್ಲಿ ಹೋಗಿ ಮನೆ ಮಾಡ್ಕೋಳ್ತೀವಾ? ಸರ್ಕಾರದ ಆದೇಶ ಪಾಲಿಸೋಣ. ಯಾರೂ ಹೆದರಬೇಡಿ. ಸ್ವಚ್ಛತೆ ಕುರಿತ ಸೂಚನೆ ಪಾಲಿಸಿದರೆ ಸೇಫಾಗಿರ್ತೀವಿ. ನಮ್ಮ ದೇಶ, ನಾವು, ನಮ್ಮವರು ನಮ್ಮತನವನ್ನು ಕಾಪಾಡೋಣ. ಕರೊನಾ ವಿರುದ್ಧ ಯುದ್ಧ ಸಾರಿರುವವರಿಗೆ ಭಾನುವಾರ ಕೃತಜ್ಞತೆ ಸಲ್ಲಿಸೋಣ.
ಪ್ರತಿಯೊಬ್ಬರ ಹೋರಾಟ ಅನಿವಾರ್ಯ
ಜಗತ್ತಿನಾದ್ಯಂತ ಹರಡಿರುವ ಈ ಕರೊನಾ ವೈರಸ್ ತಡೆಯಲು ನಾವು ತುಂಬ ಶ್ರಮ ಪಡೆಯಬೇಕು. ಬೇಜವಾಬ್ದಾರಿತನ ತೋರಿ ನಿರ್ಲಕ್ಷಿಸಿದರೆ ಎಲ್ಲರಿಗೂ ಅಪಾಯವಿದೆ. ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಮನೆಯಲ್ಲೇ ಇರುವ ತನಕ ನಾಳಿನ ಕರ್ಫ್ಯೂ ಬೆಂಬಲಿಸಿ. ವೈರಸ್ ಹರಡುವಿಕೆ ತಡೆಯೋಣ. ನಿಜವಾದ ಯುದ್ಧ ಈಗ ಶುರುವಾಗಿದೆ. ಪ್ರತಿಯೊಬ್ಬರೂ ಹೋರಾಡಬೇಕಾದ ಅನಿವಾರ್ಯತೆ ಇದೆ.
ಇದನ್ನು ಕೇಳಿ, ದಯವಿಟ್ಟು ಭಾಗವಹಿಸಿ. ನಾವೇನಾದರೂ ಕಳೆದುಕೊಳ್ಳುತ್ತೇವಾ? ಇಲ್ಲ. ನಾವೇನಾದರೂ ಪಡೆದುಕೊಳ್ಳುತ್ತೇವಾ? ಬಹುಶಃ. ಕಡೇಪಕ್ಷ ಇದನ್ನು ಪ್ರಯತ್ನಿಸಿ, ಎಲ್ಲಕ್ಕಿಂತ ಹೆಚ್ಚು ಇದನ್ನು ನಾವು ನಮ್ಮದೇ ಜೀವಗಳನ್ನು ಉಳಿಸಿಕೊಳ್ಳಲು ಮಾಡುತ್ತಿರುವುದು ಎಂಬುದಾಗಿ ನಟ ಕಿಚ್ಚ ಸುದೀಪ್, ‘ಜನತಾ ಕರ್ಫ್ಯೂ’ ಕುರಿತಾಗಿ ವಿಡಿಯೋವೊಂದನ್ನು ಟ್ವೀಟ್ವಾಡಿಕೊಂಡಿದ್ದಾರೆ.
ಇಡೀ ದೇಶ ಕರೊನಾ ವಿರುದ್ಧ ಸಮರ ಸಾರುವ ಪರಿಸ್ಥಿತಿಯಲ್ಲಿದೆ. ಅದಕ್ಕಾಗಿ ಜನತಾ ಕರ್ಫ್ಯೂಗೆ ಕರೆ ನೀಡಲಾಗಿದೆ. ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ನಮ್ಮ ಮನೆಯ ಯಾರೂ ಹೊರಗೆ ಬರುವುದಿಲ್ಲ.
ಕರೊನಾ ಕಡಿಮೆ ಆಗುವವರೆಗೂ ಮಾಡಿ
ಕೊವಿಡ್-19 ವಿರುದ್ಧ ಜಾಗೃತಿಗಾಗಿ ಜನತಾ ಕರ್ಫ್ಯೂಗೆ ಕರೆ ನೀಡಲಾಗಿದೆ. ಕರೊನಾ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಡಬೇಕು. ಅದರ ವಿರುದ್ಧ ಕೆಲಸ ಮಾಡುತ್ತಿರುವ ವೈದ್ಯರು-ಪೊಲೀಸರು ಎಲ್ಲರಿಗೂ ನಾವು ಬೆಂಬಲ ವ್ಯಕ್ತಪಡಿಸಬೇಕು. ಭಾನುವಾರ ನಾನು ನನ್ನ ಕುಟುಂಬದ ಜತೆಗೆ ಮನೆಯಲ್ಲೇ ಇರುತ್ತೇನೆ, ನೀವೆಲ್ಲರೂ ಮನೆಯಲ್ಲೇ ಇರಿ. ಭಾನುವಾರ ಮಾತ್ರ ಅಂತಲ್ಲ, ಕರೊನಾ ಕಾಟ ಕಡಿಮೆ ಆಗಿರುವವರೆಗೂ ಮನೆಯಲ್ಲೇ ಇರಿ.
ನಾನು ನನ್ನ ಕುಟುಂಬ ಭಾನುವಾರ ಮನೆ ಬಿಟ್ಟು ಹೊರಗೆ ಬರುವುದಿಲ್ಲ. ನೀವೂ ಹಾಗೇ ಮಾಡಿ. ಹಾಗೆಯೇ ಕರೊನಾ ವಿರುದ್ಧ ನಮ್ಮನ್ನು ಕಾಪಾಡುತ್ತಿರುವ ಮತ್ತು ಹೋರಾಡುತ್ತಿರುವ ವೈದ್ಯರು, ಪೊಲೀಸರು ಮತ್ತು ಆ ಕುರಿತ ಎಲ್ಲ ವಿಷಯ ನಮಗೆ ತಲುಪಿಸುತ್ತಿರುವ ಮಾಧ್ಯಮದವರಿಗೆ ಮನೆಯಿಂದಲೇ ಜೋರಾಗಿ ಚಪ್ಪಾಳೆ ತಟ್ಟಿ ಧನ್ಯವಾದ ಸಲ್ಲಿಸೋಣ.
ರಾಜಕುಮಾರ್ ಅಕಾಡೆಮಿಯಿಂದ ಜಾಗೃತಿ
ಕರೊನಾ ವೈರಸ್ ವಿರುದ್ಧ ಡಾ.ರಾಜಕುಮಾರ್ ಅಕಾಡೆಮಿ ಕೂಡ ಜಾಗೃತಿ ಮೂಡಿಸುತ್ತಿದೆ. ಕರೊನಾ ಮಾತ್ರವಲ್ಲದೆ ಕಾಲರಾ ರೋಗದ ಲಕ್ಷಣಗಳ ಬಗ್ಗೆಯೂ ಪ್ರತ್ಯೇಕವಾಗಿ ತಿಳಿಸುವ ಮೂಲಕ ಈ ಅಕಾಡೆಮಿ ಸಾಮಾಜಿಕ ಕಳಕಳಿ ತೋರುತ್ತಿದೆ. ಕರೊನಾ ರೋಗ ಲಕ್ಷಣಗಳು ಹಾಗೂ ಅದರ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪೋಸ್ಟರ್ಗಳನ್ನು ಪ್ರಕಟಿಸಿ ಅಕಾಡೆಮಿ ಜಾಗೃತಿ ನಡೆಸುತ್ತಿದೆ. ಮತ್ತೊಂದೆಡೆ ಜನತಾ ಕರ್ಫ್ಯೂಗೆ ಬೆಂಬಲಿಸುವಂತೆ ‘ಹೊಂಬಾಳೆ ಫಿಲಮ್್ಸ’ ಕೂಡ ಸೋಷಿಯಲ್ ಮೀಡಿಯಾ ಮೂಲಕ ಕೋರಿಕೊಂಡಿದೆ.
ಕರೊನಾ ವೈರಸ್ ತಡೆಯಬಹುದು, ಅದನ್ನು ಕೊನೆಗೊಳಿಸಬಹುದು. ಸ್ವಚ್ಛತೆ, ಸಾಮಾಜಿಕ ಅಂತರದಿಂದ ಅದು ಹರಡದಂತೆ ತಡೆಯಬಹುದು. ಸಾಧ್ಯವಾದಷ್ಟೂ ಜನಜಂಗುಳಿ ಇರುವ, ಸಾರ್ವಜನಿಕ ಸ್ಥಳಗಳಿಗೆ ಹೋಗಬೇಡಿ. ಈಗ ನಮ್ಮನ್ನು ನಾವು ಚೆನ್ನಾಗಿ ನೋಡಿಕೊಳ್ಳದಿದ್ದರೆ ಮುಂದೆ ಕಷ್ಟ ಆಗುತ್ತದೆ.
ನಮ್ಮ ಆದ್ಯತೆಗಳು ನಮ್ಮ ಜೀವಕ್ಕಿಂತ ಮುಖ್ಯವಲ್ಲ. ಉತ್ತಮ ಭವಿಷ್ಯಕ್ಕಾಗಿ ಸಲಹೆ ಸೂಚನೆಗಳನ್ನು ಪಾಲಿಸಿ, ಮನೆಯಲ್ಲೇ ಇರೋಣ.
ಭಾನುವಾರ ಪೂರಾ ನಾನು ಮನೆಯಲ್ಲೇ ಇದ್ದು ಬೇರೆ ಯಾರನ್ನೂ ಭೇಟಿ ಮಾಡದೆ, ಎಲ್ಲಿಗೂ ಹೋಗದೆ ಜನತಾ ಕರ್ಫ್ಯೂನಲ್ಲಿ ಭಾಗವಹಿಸುತ್ತೇನೆ. ಕರೊನಾ ವೈರಸ್ಅನ್ನು ಕೊಲ್ಲೋಣ, ಎಲ್ಲರೂ ಆರೋಗ್ಯದಿಂದಿರೋಣ.
ಜನತಾ ಕರ್ಫ್ಯೂಗೆ ಪ್ರಧಾನಿ ಕರೆ ನೀಡಿದ್ದಾರೆ. ನಾನು ನನ್ನ ಕುಟುಂಬ ಅದನ್ನು ಪಾಲಿಸಲಿದ್ದೇವೆ. ಇದರಿಂದ ಕರೊನಾ ಹರಡುವಿಕೆ ತಡೆಗಟ್ಟಬಹುದು. ಮನೆಯಲ್ಲೇ ಇರಿ ಅಂತ ಹೇಳುತ್ತಿದ್ದಾರೆ, ಬೇರೇನೂ ಇಲ್ಲ. ಹಾಗೆಯೇ ಅದರ ವಿರುದ್ಧ ಪ್ರತ್ಯಕ್ಷವಾಗಿ ಹೋರಾಡುತ್ತಿರುವ ಎಲ್ಲರಿಗೂ ಸಂಜೆ ಕೃತಜ್ಞತೆ ಸಲ್ಲಿಸೋಣ.
| ಪವನ್ ಒಡೆಯರ್ ನಿರ್ದೇಶಕ ಮತ್ತು ಅಪೇಕ್ಷಾ ಪುರೋಹಿತ್ ನಟಿ