ಸಿನಿವಾಣಿ

ನಿನ್ನೆಯಷ್ಟೇ ಬರ್ತಡೇ ಆಚರಿಸಿಕೊಂಡಿದ್ದ ಹುಬ್ಬಳ್ಳಿಯ ಹಿರಿಯ ನಟ ಸಿದ್ದರಾಜ್​ ಕಲ್ಯಾಣಕರ್​ ಇನ್ನಿಲ್ಲ

ಹುಬ್ಬಳ್ಳಿ: ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹುಬ್ಬಳ್ಳಿ ಮೂಲದ ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ನಿನ್ನೆಯಷ್ಟೇ ತಮ್ಮ 60ನೇ ಜನ್ಮದಿನವನ್ನು ಪ್ರೇಮಲೋಕ ಸೀರಿಯಲ್ ಸೆಟ್‌ನಲ್ಲಿ ಆಚರಿಸಿಕೊಂಡಿದ್ದ ಅವರು, ರಾತ್ರಿಯವರೆಗೂ ಆರಾಮಾಗಿಯೇ ಇದ್ದರು. ರಾತ್ರಿ ತಮ್ಮ ಜನ್ಮದಿನ ಸಂಭ್ರಮದ ಫೋಟೋ ಸಹ ಫೇಸ್‌ಬುಕ್​ಗೆ ಅಪಲೋಡ್ ಮಾಡಿದ್ದರು. ಆದರೆ ತಡರಾತ್ರಿ ಹೃದಯಾಘಾತದಿಂದ ಅಸುನೀಗಿದ್ದಾರೆ.

ಸಾಕಷ್ಟು ನಾಟಕಗಳಲ್ಲಿ ಅಭನಯಿಸಿದ್ದ ಅವರು, ಯಾರೇ ನೀ ಅಭಿಮಾನಿ ಮೂಲಕ ಬೆಳ್ಳೆತೆರೆ ಪ್ರವೇಶಿಸಿದ್ದರು. ಅದಾದ ಬಳಿಕ ಹೃದಯ ಹೃದಯ, ಶ್ರೀಮಂಜುನಾಥ, ಸೂಪರ್, ಬುದ್ದಿವಂತ, ಸೇರಿದಂತೆ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ಇನ್ನು ಸಾಕಷ್ಟು ಸೀರಿಯಲ‌್‌ಗಳಲ್ಲಿಯೂ ನಟಿಸಿದ್ದ ಇವರು, ಸದ್ಯ ಪ್ರಸಾರವಾಗುತ್ತಿರುವ ಪ್ರೇಮಲೋಕ ಮತ್ತು ಗಿಣಿರಾಮ್ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದರು. ಹುಬ್ಬಳ್ಳಿ ನವನಗರ ನಿವಾಸಿಯಾಗಿರುವ ಇವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.