ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಮಂದೀಪ್ ರಾಯ್ (73) ಅವರು ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗಷ್ಟೇ ಹೃದಯಘಾತಕ್ಕೀಡಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದೀಗ ಹೃದಯಾಘಾತದಿಂದಲೇ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿರುವ ನಿವಾಸದಲ್ಲಿ ತಡರಾತ್ರಿ 1.45 ಸುಮಾರಿಗೆ ಹೃದಯಾಘಾತದಿಂದ ಮಂದೀಪ್ ರಾಯ್ ಅಸುನೀಗಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಹೃದಯಾಘಾತದಿಂದ ಬಳಲಿದ್ದ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು. ಬಳಿಕ ಡಿಸ್ಚಾರ್ಜ್ ಆಗಿ ಮನೆಯಲ್ಲಿದ್ದರು.
ಇಂದು ಬೆಳಗ್ಗೆ 11 ಗಂಟೆಗೆ ಹೆಬ್ಬಾಳ ಚಿತಾಗಾರದಲ್ಲಿ ಮಂದೀಪ್ ರಾಯ್ ಅವರ ಅಂತ್ಯಕ್ರಿಯೆ ನರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ನಟ ಅನಂತ್ ನಾಗ್ ಮತ್ತು ಶಂಕರ್ ನಾಗ್ ಜೊತೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಮನ್ದೀಪ್ ರಾಯ್ ಅವರು ಡಾ.ರಾಜ್ಕುಮಾರ್ ಸೇರಿದಂತೆ ಸಿನಿ ದಿಗ್ಗಜರ ಜೊತೆ ನಟಿಸಿದ್ದಾರೆ. ಮಿಂಚಿನ ಓಟ, ಬೆಂಕಿಯ ಬಲೆ, ಆಕಸ್ಮಿಕ, ಏಳು ಸುತ್ತಿನ ಕೋಟೆ, ಆಸೆಗೊಬ್ಬ ಮೀಸೆಗೊಬ್ಬ, ಆಪ್ತರಕ್ಷಕ, ಆಂಟಿ ಪ್ರೀತ್ಸೆ, ಪ್ರೀತ್ಸೋದ್ ತಪ್ಪಾ?… ಹೀಗೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.