ಬೆಂಗಳೂರು: ದಂತಕಥೆ, ತಲ್ವಾರ್ಪೇಟೆ, ಮರ್ಯಾದಸ್ಥ...- ಹೀಗೆ ಮುಂದಿನ ದಿನಗಳಲ್ಲಿ ನಟಿಸುತ್ತಿರುವ ಹೊಸ ಚಿತ್ರಗಳ ಪಟ್ಟಿಯನ್ನೇ ಕೆಲವು ದಿನಗಳ ಹಿಂದೆ ‘ವಿಜಯವಾಣಿ’ಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಹೇಳಿದ್ದರು ವಸಿಷ್ಠ ಸಿಂಹ. ಈ ಪೈಕಿ ‘ದಂತಕಥೆ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
‘ದಂತಕಥೆ’ ಚಿತ್ರದಲ್ಲಿ ವಸಿಷ್ಠ ಒಬ್ಬರೇ ಅಲ್ಲ, ಕಿಶೋರ್ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರೂ ಪೊಲೀಸ್ ಅಧಿಕಾರಿಗಳಾಗಿ ನಟಿಸುತ್ತಿರುವುದು ವಿಶೇಷ. ಇದೊಂದು ಪೊಲೀಸ್ ತನಿಖೆಯ ಕುರಿತಾದ ಚಿತ್ರವಾಗಿದ್ದು, ಒಂದು ಸಣ್ಣ ಕೇಸ್ ಹೇಗೆ ಬೆಳೆಯುತ್ತದೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ರಹಸ್ಯವನ್ನು ಬೇಧಿಸಲು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ರೋಚಕವಾಗಿ ಹೇಳಲಾಗುತ್ತದೆ ಎನ್ನುತ್ತಾರೆ ನಿರ್ದೇಶಕ ವಚನ್.
ವಚನ್ ಈ ಹಿಂದೆ ತೆಲುಗು ಮತ್ತು ತಮಿಳಿನ ‘ಯೂ ಟರ್ನ್’ ಚಿತ್ರಗಳಿಗೆ ಪವನ್ಗೆ ಸಹಾಯಕರಾಗಿ ಕೆಲಸ ಮಾಡಿದ್ದರಂತೆ. ಈಗ ‘ದಂತಕಥೆ’ ಚಿತ್ರದ ಕಥೆ ಬರೆಯುವುದರ ಜತೆಗೆ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರವನ್ನು ಜನಾರ್ಧನ್ ಅವರು ನಿರ್ವಿುಸುತ್ತಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಮಾಸ್ತಿ ಮಂಜು ಈ ಚಿತ್ರಕ್ಕೆ ಪವರ್ಫುಲ್ ಸಂಭಾಷಣೆಗಳನ್ನು ರಚಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಸಿಷ್ಠಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸುವ ಸಾಧ್ಯತೆ ಇದೆ. ಈಗಾಗಲೇ ಚಿತ್ರತಂಡದವರು ಅವರ ಜತೆಗೆ ಮಾತನಾಡಿದ್ದು, ಡೇಟ್ಸ್ ಹೊಂದಾಣಿಕೆಯಾದರೆ, ಅವರೇ ಈ ಚಿತ್ರದ ನಾಯಕಿಯಾಗಲಿದ್ದಾರೆ. ಇನ್ನು ಸುಮನ್, ಧರ್ಮಣ್ಣ, ಪ್ರಕಾಶ್ ತುಮ್ಮಿನಾಡು, ‘ಸಿದ್ಧಲಿಂಗು’ ಶ್ರೀಧರ್ ಮುಂತಾದವರು ಚಿತ್ರದಲ್ಲಿ ನಟಿಸಲಿದ್ದಾರೆ. ‘ದಂತಕಥೆ’ಯ ಚಿತ್ರೀಕರಣ ಡಿಸೆಂಬರ್ ಮೊದಲ ವಾರದಿಂದ ಬೆಂಗಳೂರು, ಮಡಿಕೇರಿ ಸುತ್ತಮುತ್ತ ನಡೆಯಲಿದ್ದು, ಕೆಲವು ದೃಶ್ಯಗಳನ್ನು ವಿದೇಶದಲ್ಲೂ ಚಿತ್ರೀಕರಿಸಲಾಗುತ್ತದಂತೆ.