ಸಿನಿವಾಣಿ

ಕರೊನಾ ಸೋಂಕಿಗೆ ಹಿರಿಯ ನಟ, ರಂಗಕರ್ಮಿ ರಾಜಾರಾಮ್ ನಿಧನ

ಬೆಂಗಳೂರು: ಚಂದನವನದ ಹಿರಿಯ ನಟ, ರಂಗಕರ್ಮಿ ರಾಜಾರಾಮ್ ಕೋವಿಡ್​ ಸೋಂಕಿನಿಂದ ನಿಧನರಾಗಿದ್ದಾರೆ. ಮೂಲತಃ ಕೋಲಾರದ ಕೆಜಿಎಫ್​ನವರಾದ ರಾಜಾರಾಮ್​, ಬೆಂಗಳೂರಿನಲ್ಲಿಯೇ ನೆಲೆ ಕಂಡುಕೊಂಡಿದ್ದರು. ಆರಂಭದಲ್ಲಿ ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದ ಅವರು, ನಿಧಾನಕ್ಕೆ ಸಿನಿಮಾ ಕಡೆಗೂ ವಾಲಿದರು, ಕಿರುತೆರೆಯಲ್ಲಿಯೂ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು.

ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗಕ್ಕೆ ಸೇರಿ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ ಹೊಂದಿದ ರಾಜಾರಾಮ್, ಮಲ್ಲೇಶ್ವರದಲ್ಲಿ ರಸಿಕ ರಂಜನಿ ಕಲಾವಿದರು ಎಂಬ ಸಂಘ ಸ್ಥಾಪಿಸಿ, ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್‌, ಕೆ. ಗುಂಡಣ್ಣ ಮುಂತಾದವರ ನಾಟಕಗಳಲ್ಲಿ ಅಭಿನಯಿಸಿದರು. ಹಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ‘ಅವರೇ ಇವರು- ಇವರೇ ಅವರು’ ಮೊದಲಾದವು ಇವರ ಕೆಲವು ಪ್ರಸಿದ್ಧ ನಾಟಕಗಳು.

ರಾಜಾರಾಂ ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಮುಂತಾದ ಸಂಸ್ಥೆಗಳೊಡನೆ ನಿರಂತರ ಒಡನಾಟ ಹೊಂದಿದ್ದರು. ರಾಜಾರಾಂ ಅವರು 1972ರಿಂದ 'ನಟರಂಗ' ಮತ್ತು 1983ರಿಂದ 'ವೇದಿಕೆ'ಯ ರಂಗ ಚಟುವಟಿಕೆಗಳಲ್ಲಿ ತೊಡಗಿ ಸಿ.ಆರ್. ಸಿಂಹ ಅವರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದರು.

ಬಿ.ವಿ. ಕಾರಂತ, ಎಂ.ಎಸ್‌. ಸತ್ಯು, ಶ್ರೀನಿವಾಸ್‌ ಜಿ. ಕಪ್ಪಣ್ಣ, ಜಯತೀರ್ಥ ಜೋಶಿ, ಸಿ.ಎಚ್‌. ಲೋಕನಾಥ್‌, ಆರ್. ನಾಗೇಶ್‌, ಪ್ರಕಾಶ್‌ ಬೆಳವಾಡಿ ಮುಂತಾದವರ ನಿರ್ದೇಶನದಲ್ಲಿ ಮಂಡೋದರಿ, ವಿಗಡವಿಕ್ರಮರಾಯ, ಎಚ್ಚಮನಾಯಕ, ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ರಾಜಾರಾಂ ಅವರದ್ದು . ಹೈದರಾಬಾದ್‌, ಚೆನ್ನೈ, ಕೋಲ್ಕತ್ತಾ, ಕಾಶ್ಮೀರ ಮುಂಬಯಿ, ಚಂಡಿಗರ್ ಮುಂತಾದೆಡೆ ನಾಟಕ ಪ್ರದರ್ಶನದಲ್ಲಿ ಭಾಗಿಯಾದರು.

ರಾಜಾರಾಂ ಹಲವು ಚಲನಚಿತ್ರಗಳು ಮತ್ತು ಕಿರುತೆರೆಯ ಕಥಾನಕಗಳಲ್ಲೂ ಅಭಿನಯಿಸಿದ್ದರು. ರಾಜಾರಾಂ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳ ಗೌರವಗಳು ಸಂದಿವೆ.