ಬೆಂಗಳೂರು: ಸ್ಯಾಂಡಲ್ವುಡ್ಗಿಂತ ಟಾಲಿವುಡ್ನಲ್ಲೇ ಹೆಚ್ಚು ಸದ್ದು ಮಾಡುತ್ತಿರುವ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಮೂರು ವರ್ಷಗಳು ಕಳೆದಿವೆ. ಸಿನಿಮಾಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದ ರಶ್ಮಿಕಾ ಇದೀಗ ತಮ್ಮ ಮೂರು ವರ್ಷದ ಸಿನಿಪಯಣದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಭರವಸೆಯೊಂದನ್ನು ನೀಡಿ ಮತ್ತೊಮ್ಮೆ ಪೇಚಿಗೆ ಸಿಲುಕಿದ್ದಾರೆ.
ಹೌದು, ಇಂದು ಮಧ್ಯಾಹ್ನ ಟ್ವೀಟ್ ಮಾಡಿರುವ ಕೂರ್ಗ್ ಬೆಡಗಿ, ಕೆಲ ದಿನಗಳ ಹಿಂದಷ್ಟೇ ನೀವೆಲ್ಲಾ ನನ್ನ ಮೂರು ವರ್ಷದ ಸಿನಿ ಜರ್ನಿಯನ್ನು ಸಂಭ್ರಮಿಸಿದ್ದೀರಿ. ಆದರೆ, ಬೇರೆಡೆ ಇದ್ದಿದ್ದರಿಂದ ನಿಮಗಾಗಿ ಏನನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೀಗ ನಾನು ಮರಳಿದ್ದೇನೆ. ನಾನು ನಿಮಗಾಗಿ ಏನೋ ಒಂದನ್ನು ಹೊಂದಿದ್ದೇನೆ. ನೀವು ಏನೇ ಕೇಳಿದರೂ ನಾನು ಉತ್ತರಿಸುತ್ತೇನೆ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಿ ಎಂದಿದ್ದಾರೆ.
ರಶ್ಮಿಕಾ ಹೇಳಿದ್ದೇ ತಡ ಸಾಮಾಜಿಕ ಜಾಲತಾಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಪ್ರವೇಶ ನೀಡಿದ ಅಭಿಮಾನಿಗಳು ರಶ್ಮಿಕಾಗೆ ಪ್ರಶ್ನೆಗಳ ಬಾಣವನ್ನು ಹರಿಬಿಡುತ್ತಿದ್ದಾರೆ. ಇತ್ತೀಚೆಗಷ್ಟೇ ನೀವು ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಜತೆ ಶೂಟಿಂಗ್ನಲ್ಲಿ ಭಾಗವಹಿಸಿದ್ದೀರಿ ನಿಮ್ಮ ಫನ್ನಿ ಕ್ಷಣ ಯಾವುದೆಂದು ನೆಟ್ಟಿರೊಬ್ಬರು ಪ್ರಶ್ನಿಸಿದ್ದಾರೆ. ಮೂರು ವರ್ಷಗಳ ಹಿಂದಿನ ಕಿರಿಕ್ ಪಾರ್ಟಿ ಚಿತ್ರದ ಬಗ್ಗೆ ಏನಾದರೂ ಹೇಳಿ, ಅದು ನಿಮ್ಮ ಮೊದಲನೆಯ ಚಿತ್ರ ಅದಕ್ಕೆ ಕೇಳುತ್ತಿದ್ದೇನೆ ಎಂದು ಮತ್ತೋರ್ವ ನೆಟ್ಟಿಗ ರಶ್ಮಿಕಾ ಬಳಿ ಕೇಳಿದ್ದಾರೆ.
ಪ್ರಶ್ನೆಗಳು ಇಷ್ಟಕ್ಕೆ ಮುಗಿಯಲಿಲ್ಲ. ಈವರೆಗೂ ತಮಿಳಿನ ಒಂದು ಚಿತ್ರಗಳಲ್ಲಿ ನಟಿಸದಿದ್ದರೂ ಇಲ್ಲಿ ಆಡಿಯನ್ಸ್ಗೆ ತುಂಬಾ ಇಷ್ಟವಾಗಿದ್ದೀರಾ ಈ ಬಗ್ಗೆ ಹೇಳಿ, ಭವಿಷ್ಯದಲ್ಲಿ ಯಾವ ಪಾತ್ರ ಮಾಡಲು ಇಚ್ಛಿಸುತ್ತೀರಾ? ಮೂರು ವರ್ಷಗಳ ಜರ್ನಿಯಲ್ಲಿ ತುಂಬಾ ಕಾಡುವಂತಹ ಯಾವುದು ಹಂಚಿಕೊಳ್ಳಿ, ಇಳಯದಳಪತಿ ವಿಜಯ್ರೊಂದಿಗಿನ ನಿಮ್ಮ ಸಿನಿಮಾಗೆ ಎದುನೋಡುತ್ತಿದ್ದೇವೆ... ಹೀಗೆ ಪ್ರಶ್ನೆಗಳ ಸುರಿಮಳೆಯೇ ರಶ್ಮಿಕಾಗೆ ಹರಿದು ಬರುತ್ತಿದೆ.
ಒಂದಕ್ಕೂ ಉತ್ತರಿಸದ ರಶ್ಮಿಕಾ
ಈವರೆಗೆ ಸಾಕಷ್ಟು ಪ್ರಶ್ನೆಗಳು ರಶ್ಮಿಕಾ ಬತ್ತಳಿಕೆ ಬಂದಿದ್ದರೂ ರಶ್ಮಿಕಾ ಮಾತ್ರ ಯಾವುದಕ್ಕೂ ಉತ್ತರ ನೀಡುವ ಗೋಜಿಗೆ ಹೋಗಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಅಡಿ ಈವರಿಕಿ ರಿಪ್ಲೈ ಇವ್ವಾಲೇದು( ಅರೇ ಈವರೆಗೂ ಉತ್ತರವೇ ನೀಡಲಿಲ್ಲ) ಎಂದು ಅಭಿಮಾನಿಯೊಬ್ಬ ತೆಲುಗಿನಲ್ಲಿ ಪ್ರಶ್ನಿಸಿ ರಶ್ಮಿಕಾ ಪಂಚ್ ನೀಡಿದ್ದಾರೆ.
ಟ್ರೋಲ್ಗೆ ಗುರಿಯಾದ ರಶ್ಮಿಕಾ
ಟ್ವೀಟ್ಗಳಿಗೆ ಉತ್ತರ ನೀಡದ ರಶ್ಮಿಕಾರನ್ನು ಮೀಮ್ಸ್ಗಳ ಮೂಲಕವೂ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಈವಮ್ಮ ಉತ್ತರ ನೀಡುತ್ತೇನೆಂದು ಹೇಳಿ ಈಗ ಏನು ಮಾಡುತ್ತಿದ್ದಾರೆ. ಒಂದಕ್ಕೂ ಉತ್ತರ ನೀಡಿಲ್ಲ. ಇದೆಲ್ಲಾ ಬೇಕಿತ್ತಾ, ಸುಮ್ಮನಿದ್ದರೆ ಆಗುತ್ತಿರಲಿಲ್ಲವಾ? ಎಂದು ಹೇಳುವುದರೊಂದಿಗೆ ತಮಗನಿಸಿದ ಮೀಮ್ಸ್ಗಳನ್ನು ಬಳಸಿ ರಶ್ಮಿಕಾರನ್ನು ಟ್ರೋಲ್ಗೆ ಗುರಿಯಾಗಿಸಿಕೊಂಡಿದ್ದಾರೆ.