ಸಿನಿವಾಣಿ

ಟಿಕ್​ಟಾಕ್​ ಬ್ಯಾನ್​ಗೆ ಸ್ಯಾಂಡಲ್​ ವುಡ್​ ನಿರ್ದೇಶಕರಿಂದ ಶುರುವಾಯ್ತು ಅಭಿಯಾನ

ಬೆಂಗಳೂರು: ಟಿಕ್​ಟಾಕ್​ಗೆ ಇತೀಶ್ರೀ ಹಾಡುವ ಕಾಲ ಸಮೀಪಿಸುವ ಹಾಗೆ ಕಾಣುತ್ತಿದೆ. ಎಲ್ಲೆಡೆ ಬ್ಯಾನ್​ಗೆ ಕರೆ ನೀಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸ್ವದೇಸಿ ಉತ್ಪನ್ನಗಳ ಬಳಕೆಗೆ ಹೆಚ್ಚು ಒತ್ತು ನೀಡಿ, ಅದನ್ನೇ ಬಳಕೆ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದ್ದರು. ಇದೀಗ ಆ ಒಂದು ಮಾತಿಗೆ ದೇಶವ್ಯಾಪಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ವಸ್ತುಗಳ ಬಳಕೆಯನ್ನು ನಿಷೇಧ ಮಾಡಿ ದೇಸಿ ಉತ್ಪನ್ನಗಳತ್ತ ಜನ ಮನಸು ಮಾಡಿದ್ದಾರೆ. ಅದರಲ್ಲೂ ಈ ಒಂದು ನೀತಿಯಿಂದ ಚೀನಾ ಮೂಲದ ಟಿಕ್​ಟಾಕ್​ ಕಂಪನಿಗೂ ದೊಡ್ಡ ಹೊಡೆತ ಬಿದ್ದಿದೆ! ಅದ್ಯಾವ ಮಟ್ಟಿಗೆ ಅಂದರೆ, ಸ್ಯಾಂಡಲ್​ವುಡ್​ ನಿರ್ದೇಶಕರೂ ಈಗ ಟಿಕ್​ ಟಾಕ್​ ಬ್ಯಾನ್​ ಬಗ್ಗೆ ಅಭಿಯಾನವನ್ನೇ ಶುರುಮಾಡಿದ್ದಾರೆ.

ಹೌದು, ನಿರ್ದೇಶಕರಾದ ಎ.ಪಿ ಅರ್ಜುನ್​, ಸಂತೋಷ್ ಆನಂದ್​ ರಾಮ್​, ಪವನ್​ ಒಡೆಯರ್​ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬ್ಯಾನ್​ ಟಿಕ್​ಟಾಕ್​ ಜೈಹಿಂದ್​ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಬಾಲಿವುಡ್​ನ ಹಿರಿಯ ನಟ ಪರೇಶ್​ ರಾವಲ್​ ಬ್ಯಾನ್​ ಟಿಕ್​ಟಾಕ್ ಎಂದು ಟ್ವಿಟ್​ ಮಾಡಿದ್ದರು. ಅವರ ಆ ಟ್ವಿಟ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಬ್ಯಾನ್​ಗೆ ನಿರ್ಧರಿಸಿದ್ದಾರೆ. ಒಂದಷ್ಟು ಮಂದಿ ಆ್ಯಪ್​ ಅನ್​ಇನ್ಸ್ಟಾಲ್​ ಮಾಡಿದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೀಗ ಅದೇ ಟ್ರೆಂಡ್​ ಕನ್ನಡದಲ್ಲೂ ಶುರುವಾಗಿದ್ದು, ಸ್ಯಾಂಡಲ್​ವುಡ್​ ನಿರ್ದೇಶಕರ ಈ ಕಾರ್ಯಕ್ಕೆ ಅವರ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತಷ್ಟು ಸಿನಿಮಾ ತಾರೆಯರು ಈ ಕೆಲಸಕ್ಕೆ ಧುಮುಕಬೇಕೆಂದು ಒತ್ತಾಯಿಸುತ್ತಿದ್ದಾರೆ.