ಬೆಂಗಳೂರು: ವಿಮರ್ಶಕರೇ ಆಯ್ಕೆ ಮಾಡಿದ ಮೊದಲ ವರ್ಷದ ‘ಚಂದನವನ ಫಿಲಂ ಕ್ರಿಟಿಕ್ಸ್ ಅವಾರ್ಡ್’ ಕಾರ್ಯಕ್ರಮ ಶನಿವಾರ ಸಂಜೆ ಅದ್ಧೂರಿಯಾಗಿ ನಡೆಯಿತು. ‘ಪ್ರೀಮಿಯರ್ ಪದ್ಮಿನಿ’ ಚಿತ್ರಕ್ಕಾಗಿ ನವರಸನಾಯಕ ಜಗ್ಗೇಶ್ಗೆ
ಅತ್ಯುತ್ತಮ ನಟ ಪ್ರಶಸ್ತಿ ದೊರೆತರೆ, ‘ರಂಗನಾಯಕಿ’ ಚಿತ್ರದ ನಟನೆಗಾಗಿ ಅದಿತಿ ಪ್ರಭುದೇವ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು. ಕನ್ನಡ ಸಿನಿಮಾ ಪತ್ರಕರ್ತರು ಮತ್ತು ವಿಮರ್ಶಕರು ವೋಟಿಂಗ್ ಮೂಲಕ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ತಂತ್ರಜ್ಞರು ಮತ್ತು ಕಲಾವಿದರು ಇಬ್ಬರಿಗೂ ಈ ಪ್ರಶಸ್ತಿ ನೀಡಲಾಯಿತು.
6 ವಿಭಾಗಗಳು ‘ಅವನ’ ಪಾಲು: 19 ವಿಭಾಗಗಳ ಪ್ರಶಸ್ತಿ ಪಟ್ಟಿಯಲ್ಲಿ ‘ಅವನೇ ಶ್ರೀಮನ್ನಾರಾಯಣ’ ಆರು ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಹೆಚ್ಚು ಪ್ರಶಸ್ತಿ ಗಳಿಸಿದ ಚಿತ್ರವಾಯಿತು. ಕಲಾ ನಿರ್ದೇಶನ, ನೃತ್ಯ ನಿರ್ದೇಶನ ಹಿನ್ನೆಲೆ ಸಂಗೀತ, ಸಾಹಸ ನಿರ್ದೇಶನ, ಅತ್ಯುತ್ತಮ ವಿಎಫ್ಎಕ್ಸ್ , ಅತ್ಯುತ್ತಮ ಛಾಯಾಗ್ರಹಣ, ವಿಭಾಗಗಳಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ನೀಡಲಾಯಿತು. ‘ಪ್ರೀಮಿಯರ್ ಪದ್ಮಿನಿ’ ಅತ್ಯುತ್ತಮ ಚಿತ್ರ: ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದ , ರಮೇಶ್ ಇಂದಿರಾ ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಯಿತು.
ಜತೆಗೆ ಜಗ್ಗೇಶ್ ಅವರಿಗೆ ಇದೇ ಚಿತ್ರದ ನಟನೆಗೆ ಅತ್ಯುತ್ತಮ ನಟ, ಸಂಕಲನಕ್ಕೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿಯನ್ನು ರಾಜೇಂದ್ರ ಅರಸ್ ಅವರಿಗೆ ನೀಡಲಾಯಿತು. ‘ಬೆಲ್ ಬಾಟಮ್ ಚಿತ್ರದ ಅತ್ಯುತ್ತಮ ಚಿತ್ರಕಥೆಗೆ ನಿರ್ದೇಶಕ ಜಯತೀರ್ಥ ಪ್ರಶಸ್ತಿ ಪಡೆದುಕೊಂಡರೆ, ಅದೇ ಚಿತ್ರದ ‘ಆದಿ ಜ್ಯೋತಿ ಬನ್ಯೋ’ ಹಾಡನ್ನು ಹಾಡಿದ ಕಡಬಗೆರೆ ಮುನಿರಾಜು ಅವರಿಗೆ ಉತ್ತಮ ಗಾಯಕ ಎಂದು ಪುರಸ್ಕರಿಸಲಾಯಿತು.
ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಕೂಡ ‘ಬೆಲ್ಬಾಟಮ್ಪಾಲಾಗಿದ್ದು, ಅಜನೀಶ್ ಅದನ್ನು ಪಡೆದುಕೊಂಡರು. ‘ಕವಲುದಾರಿ’ ಚಿತ್ರದ ‘ಸಂಶಯ’ ಹಾಡನ್ನು ಹಾಡಿದ ಆದಿತಿ ಸಾಗರ್ ಅತ್ಯುತ್ತಮ ಗಾಯಕಿಯಾಗಿ ಪ್ರಶಸ್ತಿ ಪಡೆದುಕೊಂಡರು. ಅನಂತ್ನಾಗ್ ಇದೇ ಚಿತ್ರದ ನಟನೆಗಾಗಿ ಪೋಷಕ ನಟ ಪ್ರಶಸ್ತಿಗೆ ಪಾತ್ರವಾದರು. ಕವಿರಾಜ್ಗೆ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಸಂಭಾಷಣೆಗೆ ಪ್ರಶಸ್ತಿ ಸಿಕ್ಕಿತು. ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಪುತ್ರಿ ಐಶ್ವರ್ಯ ಉಪೇಂದ್ರ (ದೇವಕಿ)ಅತ್ಯುತ್ತಮ ಬಾಲನಟಿಯಾದರೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಭಾಗೀರಥಿಬಾಯಿ ಕದಂ (ಮಿಸ್ಸಿಂಗ್ ಬಾಯ್) ಮತ್ತು ಸೋನುಗೌಡ (ಐಲವ್ ಯೂ) ಹಂಚಿಕೊಂಡರು.
‘ಮುಂದಿನ ನಿಲ್ದಾಣ’ ಚಿತ್ರದ ‘ಇನ್ನೂನು ಬೇಕಾಗಿದೆ..’ ಹಾಡಿನ ಸಾಹಿತ್ಯಕ್ಕೆ ಪ್ರಮೋದ್ ಮರವಂತೆ ಅತ್ಯುತ್ತಮ ಚಿತ್ರಸಾಹಿತಿ ಪ್ರಶಸ್ತಿ ಪಡೆದುಕೊಂಡರು.
ನನ್ನ ಆರಂಭದ ದಿನಗಳಿಂದಲೂ ಮಾಧ್ಯಮಗಳು ಪ್ರೋತ್ಸಾಹ ನೀಡಿವೆ. ಈಗ ಪತ್ರಕರ್ತರೆಲ್ಲರೂ ಸೇರಿ ನೀಡುತ್ತಿರುವ ಪ್ರಶಸ್ತಿಯಲ್ಲಿ ನನಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿದ್ದು ಖುಷಿ ನೀಡಿದೆ. ಈ ಕ್ರೆಡಿಟ್ ನಿರ್ದೇಶಕ ರಮೇಶ್ ಇಂದಿರಾ ಅವರಿಗೆ ಸಲ್ಲಬೇಕು. | ಜಗ್ಗೇಶ್ ನಟ