ಬೆಂಗಳೂರು: ಕರೊನಾ ಸೋಂಕು ಹರಡದಂತೆ ಸ್ಯಾಂಡಲ್ವುಡ್ ಸ್ಟಾರ್ಗಳನೇಕರು ಜಾಗೃತಿ ಮೂಡಿಸುವ ವಿಡಿಯೋಗಳನ್ನು ಶೇರ್ ಮಾಡ್ತಾ ಇದ್ರೆ, ಮನೆಯಲ್ಲಿ ಏನೇನು ಮಾಡುತ್ತಿದ್ದೇವೆ ಎಂಬ ವರದಿಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸ್ತಾ ಇದ್ರೆ, ಸೋಷಿಯಲ್ ಡಿಸ್ಟೆನ್ಸಿಂಗ್ ಬಗ್ಗೆ ಹೇಳ್ತಾ ಇದ್ರೆ ನಟಿ ಶರ್ಮಿಳಾ ಮಾಂಡ್ರೆ ಮಾಡಿದ್ದೇನು?
ಶರ್ಮಿಳಾ ಮಾಂಡ್ರೆ ಪ್ರಯಾಣಿಸಿದ್ದ ಐಷಾರಾಮಿ ಕಾರು ಬೆಂಗಳೂರಿನ ವಸಂತ ನಗರದ ಅಂಡರ್ ಪಾಸ್ನ ಪಿಲ್ಲರ್ಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ. ಕಾರಿನಲ್ಲಿ ಮಾಂಡ್ರೆ ಮತ್ತು ಅವರ ಸ್ನೇಹಿತರು ಇದ್ದರು ಎಂದು ಹೇಳಲಾಗುತ್ತಿದೆ. ಈ ಅವಗಢ ಸಂಭವಿಸಿದ ಬಳಿಕ ಅವರು ಮೊದಲ ಮಿಲ್ಲರ್ಸ್ ರಸ್ತೆಯಲ್ಲಿರುವ ಒಂದು ಆಸ್ಪತ್ರೆಗೆ ತುರ್ತು ಚಿಕಿತ್ಸೆ ಪಡೆಯಲು ಹೋಗಿದ್ದರು. ಅಪಘಾತ ಕೇಸ್ ಎಂದು ಗೊತ್ತಾಗುತ್ತಲೇ ಪೊಲೀಸರಿಗೆ ತಿಳಿಸಿ ಎಂದಿದ್ದಾರೆ. ಅಲ್ಲಿಂದ ಹೊರಬಿದ್ದ ಈ ಗ್ಯಾಂಗ್ ಬಳಿಕ ಹೋದದ್ದು ಅಲ್ಲೇ ಪಕ್ಕದಲ್ಲಿದ್ದ ಮತ್ತೊಂದು ಆಸ್ಪತ್ರೆಗೆ.
ಬಳಿಕ ಕಾರು ಅಪಘಾತವಾದುದು ಜಯನಗರ, ಜೆಪಿ ನಗರ ಎಂದು ಹೇಳುತ್ತ ಎಲ್ಲರನ್ನೂ ಗೊಂದಲಕ್ಕೆ ಈಡುಮಾಡಿದ್ದಾಗಿ ಅಲ್ಲಿದ್ದವರು ಹೇಳುತ್ತಿದ್ದರು. ಈ ಅಪಘಾತಕ್ಕೆ ಸಂಬಂಧಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ. ಕಾರು ಚಲಾಯಿಸುತ್ತಿದ್ದವರು ಯಾರು? ಮದ್ಯಸೇವಿಸಿ ಜಾಲಿ ರೈಡ್ ಹೊರಟಿದ್ರಾ? ಪೊಲೀಸ್ ಪಾಸ್ ಪಡೆಯದೇ ನಿಯಮ ಉಲ್ಲಂಘಿಸಿದ್ದೇಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನಷ್ಟೆ ಉತ್ತರ ಸಿಗಬೇಕಾಗಿದೆ.