ಬೆಂಗಳೂರು: ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಮಯೂರಿ ಕ್ಯಾತರಿ, ಇಂದು ತಮ್ಮ ಬಹುಕಾಲದ ಸ್ನೇಹಿತ ಅರುಣ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅರುಣ್, ಮಯೂರಿ ಅವರಿಗೆ ಬಹಳ ವರ್ಷಗಳ ಪರಿಚಯ. ಸುಮಾರು 10 ವರ್ಷಗಳ ಗೆಳೆತನದ ಬಳಿಕ ಅರುಣ್ ಮತ್ತು ಮಯೂರಿ ಮದುವೆಯಾಗಿದ್ದಾರೆ. ಇದನ್ನೂ ಓದಿ: Photos: ಮಯೂರಿ ಮದುವೆಯ ಫೋಟೋ ಗ್ಯಾಲರಿ
ದಿಢೀರ್ ಮದುವೆ ಸುದ್ದಿ ನೀಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದ ಮಯೂರಿ, ಮದುವೆ ಬಳಿಕ ತಮ್ಮ ಫೇಸ್ಬುಕ್ನಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮಾಂಗಲ್ಯಧಾರಣೆ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಹೌದು ನಾನು ಮದುವೆಯಾಗಿದ್ದೇನೆ. ಹತ್ತು ವರ್ಷದ ಸ್ನೇಹಕ್ಕೆ ಇಂದು ಅರ್ಥ ನೀಡಿದ್ದೇವೆ ಎಂದು ಬರೆದಿರುವ ಮಯೂರಿ, ಮತ್ತಷ್ಟು ವಿಡಿಯೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇದೊಂದು ಲವ್ ಕಂ ಅರೇಂಜ್ಡ್ ಮದುವೆಯಾಗಿದ್ದು, ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಅತ್ಯಂತ ಸರಳವಾಗಿ, ಕೆಲವೇ ಜನರ ಸಮ್ಮುಖದಲ್ಲಿ ನಡೆದಿದೆ. ಇದನ್ನೂ ಓದಿ: VIDEO| ಸರಳವಾಗಿ ನಡೆಯಿತು ಮಯೂರಿ ಮದುವೆ …
ಕಳೆದ ತಿಂಗಳು ಮೇ 31ರಂದು ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋ ತೆಗೆಸಿಕೊಂಡು ಮಯೂರಿ ‘ಫೀಲಿಂಗ್ ಸ್ಪೆಷಲ್’ ಎಂಬ ಕ್ಯಾಪ್ಶನ್ ನೀಡಿ ಫೋಟೋ ಹಂಚಿಕೊಂಡಿದ್ದರು. ಆದರೆ ಮದುವೆಯ ಗುಟ್ಟು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಅಂತೂ ಎಲ್ಲರ ಅನುಮಾನವನ್ನು ಪರಿಸರಿಸಿದ್ದರೂ ಮದುವೆಯ ಡಿಟೇಲ್ಸ್, ಹುಡುಗನ ಬಗ್ಗೆ ಹೇಳಿದೇ ಸೀಕ್ರೆಟ್ ಮಾಡಿದ್ದ ನಟಿ, ಇಂದು ಮದುವೆಯಾಗುವ ಮೂಲಕ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.