ಬೆಂಗಳೂರು: ಸಾಮಾನ್ಯವಾಗಿ ಕಲಾವಿದರು ಅವಕಾಶಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬರಿಗೆ ಸದ್ಯಕ್ಕೆ ಅಭಿನಯ ಸಾಕು ಎಂದುಕೊಂಡಿರುವಾಗಲೇ ಅವಕಾಶವೊಂದು ಹುಡುಕಿಕೊಂಡು ಬಂದಿದೆ. ಮಾತ್ರವಲ್ಲ, ಈ ಅವಕಾಶ ಇವರನ್ನು ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾರಂಗಕ್ಕೂ ಪರಿಚಯಿಸುತ್ತಿದೆ. ಅಂದಹಾಗೆ ಇವರ ಹೆಸರು ಸಂಪದಾ.
‘ಲಹರಿ ಮ್ಯೂಸಿಕ್’ ಸಂಸ್ಥೆ ಒಂದು ದೊಡ್ಡ ಗ್ಯಾಪ್ ಬಳಿಕ ದ್ವಿಭಾಷಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಗುರುವಾರವಷ್ಟೇ ಅದಕ್ಕೆ ಮುಹೂರ್ತವನ್ನೂ ನೆರವೇರಿಸಿದೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ನಾಯಕನಾಗಿ ನಟಿಸಲಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಂಡ ಆಕ್ಷನ್-ಕಟ್ ಹೇಳಲಿದ್ದಾರೆ. ಕನ್ನಡ-ತೆಲುಗು ಎರಡೂ ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಸಿನಿಮಾದ ಶೀರ್ಷಿಕೆ ಇನ್ನಷ್ಟೇ ನಿಗದಿ ಆಗಬೇಕಿದೆ. ಈ ಚಿತ್ರದಲ್ಲಿ ಸಂಪದಾ ಎರಡನೇ ನಾಯಕಿ ಆಗಿ ನಿಖಿಲ್ ಜತೆ ಕಾಣಿಸಿಕೊಳ್ಳಲಿದ್ದಾರೆ.
‘ನಾನು ಈ ಹಿಂದೆ ‘ಮಿಥುನ ರಾಶಿ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೆ. ವಿದ್ಯಾಭ್ಯಾಸದ ಸಲುವಾಗಿ ಒಂದಷ್ಟು ಸಮಯ ಅಭಿನಯದಿಂದ ದೂರ ಇರೋಣ ಎಂದುಕೊಂಡು ಧಾರಾವಾಹಿ ತಂಡದಿಂದ ಹೊರಗೆ ಬಂದಿದ್ದೆ. ಆದರೆ ಕೆಲವೇ ದಿನಗಳಲ್ಲಿ ಈ ಅವಕಾಶ ಸಿಕ್ಕಿತು. ಕಥೆ ಬಗ್ಗೆ ಕೇಳಿದ ನನಗೆ ಒಪ್ಪದೇ ಇರಲು ಮನಸಾಗಲಿಲ್ಲ’ ಎನ್ನುತ್ತ ಈ ಚಿತ್ರತಂಡವನ್ನು ಸೇರಿದ ಹಿನ್ನೆಲೆಯನ್ನು ತಿಳಿಸಿದರು ಸಂಪದಾ.
‘ಇಲ್ಲಿ ನಾನು ಒಬ್ಬ ಶ್ರೀಮಂತ ಹುಡುಗಿ ಆಗಿ ಕಾಣಿಸಿಕೊಳ್ಳಲಿದ್ದೇನೆ. ಚಿತ್ರದಲ್ಲಿ ಸಿಇಒ ಒಬ್ಬರ ಪುತ್ರಿಯಾಗಿ ನಟಿಸಲಿದ್ದೇನೆ’ ಎನ್ನುವ ಸಂಪದಾ, ಸದ್ಯಕ್ಕಿಷ್ಟೇ ಹೇಳಬಹುದಾದ್ದು ಎನ್ನುತ್ತಾರೆ. ಫೆಬ್ರವರಿ ಮೊದಲ ವಾರದಲ್ಲಿ ಶೂಟಿಂಗ್ ಆರಂಭಿಸುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.
ಒಂದು ಭಾಷೆಯಲ್ಲಿ ಅವಕಾಶ ಸಿಗುವುದೇ ಕಷ್ಟ. ಹೀಗಿರುವಾಗ ಎರಡೆರಡು ಭಾಷೆಗಳಲ್ಲಿ ಅವಕಾಶ ಸಿಕ್ಕಿರುವುದು ಅದೃಷ್ಟ. ಅದರಲ್ಲೂ ನಿಖಿಲ್ ಕುಮಾರ್ ಜತೆ ನಟಿಸುವ ಅವಕಾಶ ಸಿಕ್ಕಿದ್ದು ತುಂಬ ಖುಷಿ ಅನಿಸುತ್ತಿದೆ. ನನ್ನ ಪಾಲಿಗೆ ಇದು 2020ರ ಕಿಕ್ಸ್ಟಾರ್ಟ್ ಎನ್ನಬಹುದು. | ಸಂಪದಾ ನಟಿ