ನವದೆಹಲಿ: ಪ್ರಸಿದ್ಧ ಫೋಟೋಗ್ರಾಫರ್ ಜಿ. ವೆಂಕಟ್ ರಾಮ್ ಅವರು ತಮ್ಮ ಬಹುನಿರೀಕ್ಷಿತ 2020ನೇ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ವಿಶೇಷವೆಂದರೆ ಈ ಬಾರಿ 19ನೇ ಶತಮಾನದ ಪ್ರಖ್ಯಾತ ಕಲಾವಿದ ರಾಜಾ ರವಿವರ್ಮ ಅವರ ಕಲೆಯ ಸ್ಪರ್ಶವನ್ನು ಕ್ಯಾಲೆಂಡರ್ಗೆ ನೀಡಿದ್ದು ನೆಟ್ಟಿಗರ ಕಣ್ಮನ ಸೆಳೆಯುತ್ತಿದೆ.
ಕ್ಯಾಲೆಂಡರ್ಗಾಗಿ ಸಿನಿಮಾ ಮತ್ತು ಡ್ಯಾನ್ಸ್ ಕ್ಷೇತ್ರದ 12 ಹೆಸರಾಂತ ಕಲಾವಿದರನ್ನು ಫೋಟೋಗ್ರಾಫರ್ ವೆಂಕಟ್ ರಾಮ್ ಬಳಸಿಕೊಂಡಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಪ್ರಸಿದ್ಧ ನಟಿಯರಾದ ಶ್ರುತಿ ಹಾಸನ್, ಸಮಂತಾ ರುತು ಪ್ರಭು ಮತ್ತು ಹಿರಿಯ ನಟಿ ರಮ್ಯಾ ಕೃಷ್ಣನ್ ಅವರು ಕ್ಯಾಲೆಂಡರ್ ಫೋಟೋಗೆ ಪೋಸ್ ನೀಡಿದ್ದಾರೆ. ಇವರು ಮಾತ್ರವಲ್ಲದೆ, ನಟಿ ನಾದಿಯಾ, ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್, ಭರತನಾಟ್ಯ ನೃತ್ಯಗಾರ್ತಿಯರಾದ ಶೋಬನಾ ಮತ್ತು ಪ್ರಿಯದರ್ಶಿನಿ ಗೋವಿಂದ್, ತಮಿಳು ಸ್ಟಾರ್ ಐಶ್ವರ್ಯ ರಾಜೇಶ್, ಮಾಜಿ ಮಲಯಾಳಂ ನಟಿ ಲಿಸ್ಸಿ ಲಕ್ಷ್ಮೀ ಮತ್ತು ನಟಿ ಮತ್ತು ನಿರ್ಮಾಪಕಿ ಲಕ್ಷ್ಮೀ ಮಂಚು ಅವರು ರವಿವರ್ಮ ಕಲಾಕೃತಿಯ ಭಂಗಿಯಲ್ಲಿ ಕ್ಯಾಮರಾಗೆ ಫೋಸ್ ನೀಡಿದ್ದಾರೆ.
ಪ್ರಖ್ಯಾತ ನಿರ್ದೇಶಕ ಮಣಿರತ್ನಂ ಪತ್ನಿ ಸುಹಾಸಿನಿ ಅವರು ಸ್ಥಾಪಿಸಿರುವ ನಾಮ್ ಹೆಸರಿನ ಚಾರಿಟಬಲ್ ಟ್ರಸ್ಟ್ಗಾಗಿ ರಾಜಾ ರವಿವರ್ಮ ಅವರ ಪ್ರಸಿದ್ಧ ಕಲಾಕೃತಿಗಳನ್ನು ಬಳಸಿಕೊಂಡು ಫೋಟೋಗ್ರಾಫರ್ ಜಿ. ವೆಂಕಟ್ ರಾಮ್ ಅವರು ಕ್ಯಾಲೆಂಡರ್ ಫೋಟೋವನ್ನು ಸೊಗಸಾಗಿ ಸಿದ್ಧಪಡಿಸಿದ್ದಾರೆ.
ನಟಿ ಸಮಂತಾ ಅವರು ತಮ್ಮ ಫೋಟೋವನ್ನು ಶೇರ್ ಮಾಡಿಕೊಂಡಿದ್ದು ಅರ್ಥಗರ್ಭಿತವಾದ ಯೋಜನೆಯ ಭಾಗವಾಗಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಒಳ್ಳೆಯ ಉದ್ದೇಶದ ಭಾಗವಾಗಿದ್ದಕ್ಕೆ ಅವಿಸ್ಮರಣೀಯ ಅನುಭವ ಪಡೆದಿದ್ದಕ್ಕೆ ಖುಷಿಯಾಯಿತು ಎಂದು ನಟಿ ಶ್ರುತಿ ಹಾಸನ್ ಕೂಡ ಹೇಳಿದ್ದಾರೆ. ಇನ್ನು ನೆಟ್ಟಿಗರಂತೂ ಫೋಟೋ ಕುರಿತು ಸಾಕಷ್ಟು ಮೆಚ್ಚುಗೆ ಸೂಚಿಸಿದ್ದಾರೆ. (ಏಜೆನ್ಸೀಸ್)