ನಾಲಿಗೆ ಕೇಳಿದರೂ ಹೊಟ್ಟೆ ಬಿಡುತ್ತಿರಲಿಲ್ಲ... ಎರಡು ವರ್ಷಗಳ ನರಕ ದರ್ಶನ ಬಿಚ್ಚಿಟ್ಟ ನಟಿ ಸಮಂತಾ! Samantha Ruth Prabhu  
ಸಿನಿವಾಣಿ

ನಾಲಿಗೆ ಕೇಳಿದರೂ ಹೊಟ್ಟೆ ಬಿಡುತ್ತಿರಲಿಲ್ಲ... ಎರಡು ವರ್ಷಗಳ ನರಕ ದರ್ಶನ ಬಿಚ್ಚಿಟ್ಟ ನಟಿ ಸಮಂತಾ! Samantha Ruth Prabhu

ಪ್ರಮುಖ ಮುಖ್ಯಾಂಶಗಳು

  • ತನಗಿದ್ದ ಕಾಯಿಲೆಯ ಕಹಿ ದಿನಗಳ ನೆನೆದು ನಟಿ ಸಮಂತಾ ಭಾವುಕ
  • ಮಯೋಸಿಟಿಸ್ ಕಾಯಿಲೆಯಿಂದ ಕೊನೆಗೂ ಮುಕ್ತಿ, ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ ಸಮಂತಾ
  • ಸಮಂತಾ ಸಾಕಿದ ಹೊಸ ಬೆಕ್ಕಿನ ಹೆಸರು 'ಜೆಲಾಟೊ' ಎಂದಿಡಲು ಕಾರಣವೇ ಈ ಅಪರೂಪದ ಕಾಯಿಲೆ
  • ನಟಿ ಸಮಂತಾರನ್ನು ಕಾಡಿದ 'ಮಯೋಸಿಟಿಸ್' ಕಾಯಿಲೆಯ ಅಸಲಿ ಲಕ್ಷಣಗಳು ಹಾಗೂ ಚಿಕಿತ್ಸೆ ಏನು ಗೊತ್ತಾ?
Samantha Ruth Prabhu : ಎರಡು ವರ್ಷದ ಹಿಂದೆ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು 'ಮಯೋಸಿಟಿಸ್' (Myositis) ಎಂಬ ಅಪರೂಪದ ಕಾಯಿಲೆಯಿಂದ ಬಳಲಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಭಾರಿ ಚರ್ಚೆಯಾದಾಗ ಮತ್ತು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದಾಗ ಸ್ವತಃ ಸಮಂತಾ ಅವರೇ ತಮಗಿದ್ದ ಆರೋಗ್ಯ ಸಮಸ್ಯೆಯನ್ನು ಬಹಿರಂಗಪಡಿಸಿದ್ದರು. ಈ ಕಾಯಿಲೆಯಿಂದ ಹೊರಬರಲು ಸಮಂತಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದೀಗ ಅದೇ ಕಾಯಿಲೆಯ ಬಗ್ಗೆ ಸಮಂತಾ ಮತ್ತೊಮ್ಮೆ ಮಾತನಾಡಿದ್ದಾರೆ.
ಅಂದಹಾಗೆ, ಈ ಕಾಯಿಲೆಯಿಂದಾಗಿ ತಮ್ಮ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಬೇಕಾದ ಅನಿವಾರ್ಯತೆ ಎದುರಾದ್ದರಿಂದ ಸಮಂತಾ ಅವರು ಸಿನಿಮಾಗಳಿಂದ ಸುಮಾರು ಎರಡು ವರ್ಷಗಳ ಕಾಲ ಸುದೀರ್ಘ ಬ್ರೇಕ್ ಪಡೆದುಕೊಂಡಿದ್ದರು ಮತ್ತು ಕಠಿಣ ಆಹಾರ ಪಥ್ಯದ ಕಾರಣದಿಂದಾಗಿ ಸಾಕಷ್ಟು ತೂಕವನ್ನೂ ಕಳೆದುಕೊಂಡಿದ್ದರು. ಇದೀಗ ಚಿಕಿತ್ಸೆ ಮತ್ತು ವಿಶ್ರಾಂತಿಯ ಬಳಿಕ ಚಿತ್ರರಂಗಕ್ಕೆ ಭರ್ಜರಿಯಾಗಿ ಮರಳಿರುವ ಸಮಂತಾ, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ್ದು, ಪ್ರಸ್ತುತ ತಮ್ಮ ಆರೋಗ್ಯ ಸ್ಥಿತಿ ಸಾಕಷ್ಟು ಸುಧಾರಿಸಿದೆ ಮತ್ತು ಈಗ ಯಾವುದೇ ತೊಂದರೆಯಿಲ್ಲದೆ ಆರಾಮವಾಗಿ ಆಹಾರ ಸೇವಿಸುವಷ್ಟು ಉತ್ತಮ ಸ್ಥಿತಿಯಲ್ಲಿದ್ದೇನೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.
ಕಾಯಿಲೆಯ ಸಂದರ್ಭದಲ್ಲಿ ಸಮಂತಾ ಸ್ಥಿತಿ ಹೇಗಿತ್ತು ಅಂದರೆ, ಜೀರ್ಣಾಂಗವ್ಯೂಹಕ್ಕೆ ತೊಂದರೆ ಕೊಡುವ ಯಾವುದೇ ಆಹಾರ ಸೇವಿಸಿದರೂ ಅದು ಅವರ ಕಾಯಿಲೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿತ್ತು. ಹೀಗಾಗಿ, ಅನಿವಾರ್ಯದಿಂದ ಸತತ ಎರಡು ವರ್ಷಗಳ ಕಾಲ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಗೆ ಒಂದೇ ರೀತಿಯ ಅತ್ಯಂತ ಸರಳ ಹಾಗೂ ಸಪ್ಪೆಯಾದ ಆಹಾರವನ್ನೇ ಸಮಂತಾ ಸೇವಿಸುತ್ತಿದ್ದರು. ಈ ಕಠಿಣ ಪಥ್ಯದ ದಿನಗಳ ನಂತರ ವೈದ್ಯರು ಮೊದಲ ಬಾರಿಗೆ ಸಕ್ಕರೆ ಮತ್ತು ಹಾಲಿನ ಅಂಶವಿಲ್ಲದ 'ಜೆಲಾಟೊ' (ಐಸ್‌ಕ್ರೀಮ್) ತಿನ್ನಲು ಅನುಮತಿ ನೀಡಿದ್ದರಿಂದ, ವಾರಕ್ಕೊಮ್ಮೆ ಸಿಗುತ್ತಿದ್ದ ಆ ಐಸ್​ಕ್ರೀಮ್​ಗಾಗಿ ಸಮಂತಾ ಅವರು ಇಡೀ ವಾರ ಕಾತರದಿಂದ ಕಾಯುತ್ತಿದ್ದರು. ಇದೇ ನೆನಪಿಗಾಗಿ ಅವರು ತಾವು ಸಾಕಿದ ಹೊಸ ಬೆಕ್ಕಿಗೆ ಜೆಲಾಟೊ ಎಂದೇ ಹೆಸರಿಟ್ಟಿದ್ದಾರೆ.
ಪ್ರಸ್ತುತ ನನ್ನ ಆರೋಗ್ಯ ಸ್ಥಿತಿ ಸಾಕಷ್ಟು ಸುಧಾರಿಸಿದ್ದು, ನನಗಿಷ್ಟವಾದ ಆಹಾರವನ್ನು ಈಗ ಸವಿಯಬಹುದಾಗಿದೆ, ಆದಾಗ್ಯೂ ಮಿತಿಮೀರಿ ಅತಿಯಾಗಿ ತಿನ್ನುವಂತಿಲ್ಲ ಎಂದು ತಿಳಿಸಿರುವ ನಟಿ ಸಮಂತಾ, ಕಳೆದ ಎರಡು ವರ್ಷಗಳಲ್ಲಿ ಅನೇಕರು ತಾವು ತೂಕ ಕಳೆದುಕೊಂಡಿದ್ದನ್ನು ಮತ್ತು ಆಹಾರ ಸೇವಿಸದಿರುವುದನ್ನು ಪ್ರಶ್ನಿಸುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇತರರ ವೈಯಕ್ತಿಕ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದು ಹೊರಗಿನವರಿಗೆ ತಿಳಿಯುವುದು ತಮಗೆ ಇಷ್ಟವಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಸಮಂತಾ, ತಾವು ಬೇಕಂತಲೇ ಆಹಾರ ಸೇವಿಸುವುದನ್ನು ನಿಲ್ಲಿಸಿರಲಿಲ್ಲ, ಬದಲಿಗೆ ಅನಾರೋಗ್ಯದ ಕಾರಣದಿಂದಾಗಿ ತಮಗೆ ಆಹಾರ ತಿನ್ನಲು ಸಾಧ್ಯವಾಗುತ್ತಿರಲಿಲ್ಲ ಎಂಬ ಕಹಿ ಸತ್ಯವನ್ನು ಹಂಚಿಕೊಂಡಿದ್ದಾರೆ.
ಮಯೋಸಿಟಿಸ್ ಎಂಬುದು ಸ್ನಾಯುಗಳ ಉರಿಯೂತ ಅಥವಾ ಸ್ನಾಯುಗಳ ಊತಕ್ಕೆ ಕಾರಣವಾಗುವ ಒಂದು ಅಪರೂಪದ ಕಾಯಿಲೆಯಾಗಿದ್ದು, ಪ್ರತಿ 1,00,000 ಜನರಲ್ಲಿ ಸುಮಾರು 4 ರಿಂದ 22 ಜನರನ್ನು ಇದು ಬಾಧಿಸುತ್ತದೆ ಎಂದು ಅಂದಾಜಿಸಲಾಗಿದೆ. ಈ ಕಾಯಿಲೆಯ ಪ್ರಮುಖ ಲಕ್ಷಣಗಳಲ್ಲಿ ಸ್ನಾಯು ನೋವು, ತೀವ್ರ ಆಯಾಸ, ಆಹಾರ ನುಂಗಲು ಕಷ್ಟವಾಗುವುದು ಮತ್ತು ಉಸಿರಾಟದ ತೊಂದರೆಗಳು ಸೇರಿವೆ. ಸಾಮಾನ್ಯವಾಗಿ ಈ ಕಾಯಿಲೆಯು ಆರಂಭದಲ್ಲಿ ತೋಳುಗಳು, ಹೆಗಲು, ಸೊಂಟ, ಹೊಟ್ಟೆ ಮತ್ತು ಬೆನ್ನುಮೂಳೆಯ ಸ್ನಾಯುಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಕಾಲಕ್ರಮೇಣ ಈ ಕಾಯಿಲೆಯು ಉಲ್ಬಣಗೊಳ್ಳುತ್ತಾ ಹೋದಂತೆ ಅನ್ನನಾಳ, ಡಯಾಫ್ರಾಮ್ (ಮಧ್ಯಪಟಲ) ಮತ್ತು ಕಣ್ಣುಗಳ ಸ್ನಾಯುಗಳಿಗೂ ಹರಡಬಹುದು. ಇದರಿಂದಾಗಿ ರೋಗಿಗಳಿಗೆ ಕುಳಿತ ಜಾಗದಿಂದ ಏಳಲು, ಮೆಟ್ಟಿಲುಗಳನ್ನು ಹತ್ತಲು ಹಾಗೂ ತೂಕವನ್ನು ಎತ್ತಲು ತೀವ್ರ ತೊಂದರೆಯಾಗುತ್ತದೆ. ಇದರೊಂದಿಗೆ ಜ್ವರ, ತೂಕ ನಷ್ಟ ಮತ್ತು ಕೀಲು ನೋವಿನಂತಹ ಲಕ್ಷಣಗಳು ಕೂಡ ಕಾಣಿಸಿಕೊಳ್ಳಬಹುದು. ಸದ್ಯಕ್ಕೆ ಈ ಮಯೋಸಿಟಿಸ್ ಕಾಯಿಲೆಗೆ ಸ್ಟೀರಾಯ್ಡ್‌ಗಳು ಮತ್ತು ಇಮ್ಯುನೊಸಪ್ರೆಸೆಂಟ್ (ರೋಗನಿರೋಧಕ ಶಕ್ತಿ ನಿಗ್ರಹಿಸುವ) ಔಷಧಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಮಂತಾ ನಟನೆಯ ಮಾ ಇಂಟಿ ಬಂಗಾರಂ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಬಾಕ್ಸ್​​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. (ಏಜೆನ್ಸೀಸ್​).