ಸಿನಿವಾಣಿ

ಕಿವಿಯ ಕೂದಲು ಉಲ್ಲೇಖಿಸಿ ನಿರ್ಮಾಪಕನಿಗೆ ತಿರುಗೇಟು ನೀಡಿದ ಸಮಂತಾ!

ಹೈದರಾಬಾದ್​: ತನ್ನ ವಿರುದ್ಧ ಅವಹೇಳನಕಾರಿ ಕಾಮೆಂಟ್ಸ್​ ಮಾಡಿದ ತೆಲುಗು ನಿರ್ಮಾಪಕ ಚಿಟ್ಟಿಬಾಬುಗೆ ನಟಿ ಸಮಂತಾ ಪರೋಕ್ಷವಾಗಿ ಹಾಗೂ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

ಸಮಂತಾ ವಿರುದ್ಧ ಟೀಕಾ ಪ್ರಹಾರ

ಇತ್ತೀಚೆಗೆ ಮಾಧ್ಯಮ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಚಿಟ್ಟಿಬಾಬು, ಸಮಂತಾ ಅವರ ಸಿನಿಮಾ ವೃತ್ತಿ ಜೀವನ ಅಂತಿಮ ಹಂತಕ್ಕೆ ಬಂದಿದೆ. ಕೇವಲ ಹಣದ ಲಾಭಕ್ಕಾಗಿಯೇ ಪುಷ್ಪಾ ಚಿತ್ರದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾ ಪ್ರಚಾರಕ್ಕೆ ಅಗ್ಗದ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಸ್ಟಾರ್​ ನಟಿ ಎಂಬ ಪಟ್ಟವನ್ನು ಕಳೆದುಕೊಂಡ ಕ್ಷಣದಿಂದ ಸಮಂತಾ ಅವರ ತಮ್ಮ ಹಾದಿಯಲ್ಲಿ ಬರುವ ಎಲ್ಲ ಆಫರ್​ಗಳನ್ನು ಸ್ವಲ್ಪವೂ ಯೋಚಿಸದೇ ಸ್ವೀಕರಿಸುತ್ತಿದ್ದಾರೆ. ಶಾಕುಂತಲಂ ಸಿನಿಮಾದಲ್ಲಿ ಸಮಂತಾರನ್ನು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದು ನನಗೆ ಅಚ್ಚರಿ ತಂದಿದೆ ಎಂದು ಚಿಟ್ಟಿಬಾಬು ಸಮಂತಾ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸವಾಲುಗಳನ್ನು ಸಿನಿಮಾ ಪ್ರಚಾರದ ಸಮಯದಲ್ಲಿ ಹೇಳಿಕೊಳ್ಳುವ ಮೂಲಕ ಜನರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಪ್ರೇಕ್ಷಕರಿಗೆ ಬೇಕಾಗಿರುವುದು ಒಳ್ಳೆಯ ವಿಷಯಾಧಾರಿತ ಸಿನಿಮಾ ಹೊರತು ನಿಮ್ಮ ಕಣ್ಣೀರಲ್ಲ ಎನ್ನುವ ಮೂಲಕ ಸಮಂತಾ ವಿರುದ್ಧ ಹರಿಹಾಯ್ದಿದ್ದರು.

ಕೂದಲು ಹೇಗೆ ಬೆಳೆಯುತ್ತಾರೆ?

ಚಿಟ್ಟಿಬಾಬು ಹೇಳಿಕೆ ಸಮಂತಾ ಅವರ ಗಮನಕ್ಕೆ ಬಂದಿದ್ದು ಇನ್​ಸ್ಟಾಗ್ರಾಂ ಸ್ಟೋರಿ ಶೇರ್​ ಮಾಡಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಜನರು ಕಿವಿಯಿಂದ ಕೂದಲು ಹೇಗೆ ಬೆಳೆಯುತ್ತಾರೆ? (how do people have hair growing from ears) ಎಂಬ ಗೂಗಲ್​ ಸರ್ಚ್​ ಸ್ಕ್ರೀನ್​ಶಾಟ್​ ಅನ್ನು ಸಮಂತಾ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕೆಲ ಪುರುಷರಲ್ಲಿ ವಯಸ್ಸಾದಂತೆ ಕಿವಿಗಳಲ್ಲಿ ಕೂದಲು ಬೆಳೆಯುತ್ತದೆ. ಟೆಸ್ಟೋಸ್ಟೆರಾನ್ ಹೆಚ್ಚಾಗುವುದರಿಂದ ಹೀಗಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈ ಹಾರ್ಮೋನ್ ಕೂದಲನ್ನು ಒರಟಾಗಿ ಮತ್ತು ದಪ್ಪವಾಗುವಂತೆ ಮಾಡುತ್ತದೆ. ನಿಮ್ಮ ಕಿವಿಯ ಒಳಗಿನ ಕೂದಲು ಇಯರ್‌ವಾಕ್ಸ್‌ನೊಂದಿಗೆ ಕೆಲಸ ಮಾಡುತ್ತದೆ ಮತ್ತು ನಿಮ್ಮ ಕಿವಿಯನ್ನು ಕೊಳಕು ಮತ್ತು ಕಸದಿಂದ ದೂರವಿರಿಸುತ್ತದೆ ಎಂದು ಸಮಂತಾ ಅವರು ಶೇರ್ ಮಾಡಿಕೊಂಡಿರುವ ಸ್ಕ್ರೀನ್​​ಶಾಟ್​ನಲ್ಲಿ ಕಿವಿಯಿಂದ ಕೂದಲು ಬೆಳವಣಿಗೆಗೆ ಕಾರಣವಿದೆ.

ಸ್ಕ್ರೀನ್​ಶಾಟ್​ಗೆ #IYKYK ಎಂಬ ಹ್ಯಾಷ್​ಟ್ಯಾಗ್​ ನೀಡಿದ್ದಾರೆ. ಅದರರ್ಥ ನಿಮಗೆ ತಿಳಿದಿದ್ದರೆ, ನಿಮಗೆ ತಿಳಿದಿದೆ ಎಂದು. ಚಿಟ್ಟಿಬಾಬು ಅವರ ಕಿವಿಯಲ್ಲಿ ಕೂದಲು ಬೆಳೆದಿದ್ದು, ಅದನ್ನು ಉಲ್ಲೇಖಿಸಿ ಪರೋಕ್ಷವಾಗಿ ಸಮಂತಾ ಈ ರೀತಿ ತಿರುಗೇಟು ನಿಡಿದ್ದಾರೆ.

ಅಭಿಮಾನಿಗಳ ಬೆಂಬಲ

ಅಭಿಮಾನಿಗಳು ಸಮಂತಾರ ಪರೋಕ್ಷ ಉತ್ತರದ ಹಿಂದಿರುವ ಉದ್ದೇಶವನ್ನು ಶೀಘ್ರವಾಗಿ ಕಂಡುಕೊಂಡರು. ಚಿಟ್ಟಿಬಾಬು ಅವರ ಸ್ಕ್ರೀನ್‌ಶಾಟ್ ಮತ್ತು ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಬೆಂಬಲವನ್ನು ತೋರಿಸಿದ್ದಾರೆ. ಯಾರಾದರೂ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ನಾನು ಮೌನವಾಗಿರುವುದಿಲ್ಲ ಎಂಬುದನ್ನು ಸಮಂತಾ ಮತ್ತೊಮ್ಮೆ ತೋರಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ ಸಮಂತಾ ಕೊನೆಯದಾಗಿ ಶಾಕುಂತಲಂ ಸಿನಿಮಾದಲ್ಲಿ ಕಾಣಿಸಿಕೊಂಡರು. (ಏಜೆನ್ಸೀಸ್​)