ಸಿನಿವಾಣಿ

ನಟಿ ಸಮಂತಾಗೆ ಐದನೇ ಫಿಲ್ಮ್‌ಫೇರ್ ಪ್ರಶಸ್ತಿ! ಯಾವ ಸಿನಿಮಾಗೆ?

ಮುಂಬೈ: ದಕ್ಷಿಣ ಭಾರತದ ನಟಿ ಸಮಂತಾ ರುತ್ ಪ್ರಭು ಅವರ ಚೊಚ್ಚಲ OTT ಪ್ರಾಜೆಕ್ಟ್ 'ದಿ ಫ್ಯಾಮಿಲಿ ಮ್ಯಾನ್ - 2' ಭಾರತೀಯ ಪ್ರೇಕ್ಷಕರಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು ಮತ್ತು ಆನ್‌ಲೈನ್‌ನಲ್ಲಿ ಭರ್ಜರಿ ಯಶಸ್ಸನ್ನು ಕಂಡಿದೆ, ಸಂಕೀರ್ಣ ರಾಜಿ ಎಂಬ ಅವರ ಪಾತ್ರದ ನಟನೆಗಾಗಿ ಬಹಳಷ್ಟು ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡಿದ್ದಾರೆ ಸಮಂತಾ. ನಟಿ ಎಲ್‌ಟಿಟಿಇ ಆತ್ಮಹತ್ಯಾ ಬಾಂಬರ್ ಪಾತ್ರವನ್ನು ಈ ಸಿನಿಮಾದಲ್ಲಿ ನಿರ್ವಹಿಸಿದ್ದು, ಇದಕ್ಕೆ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಸ್ಯಾಮ್ ತನ್ನ ಪ್ರಶಸ್ತಿಯನ್ನು ಸ್ವೀಕರಿಸಲು ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಈಗ ಮುಂಬೈಗೆ ಹೋಗಿದ್ದಾರೆ. ನಟಿ ಪಡೆದಿರುವ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಇದು ಅವರ ಐದನೇ ಫಿಲ್ಮ್‌ಫೇರ್ ಪ್ರಶಸ್ತಿ. ಇದರ ಬಗ್ಗೆ, ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ ಅಭಿಮಾನಿಗಳ ಪ್ರೀತಿಯ ಸ್ಯಾಮ್. ಈ ಹಿಂದೆ ಸಮಂತಾ ಅವರು 'ಯೇಮ್ ಮಾಯಾ ಚೇಸಾವೆ' ಸಿನಿಮಾಗೆ 'ಅತ್ಯುತ್ತಮ ನಟಿಯಾಗಿ' ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದು, 'ಈಗಾ', 'ನೀತಾನೆ ಎನ್ ವಸಂತಂ', 'ಅ, ಆಆ' ಚಿತ್ರಗಳಿಗೂ ಅತ್ಯುತ್ತಮ ನಟಿ ಎಂದು ಒಟ್ಟು ಐದು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸದ್ಯ, ನಟಿ ಸಮಂತಾ ಅವರ ಕೈಯಲ್ಲಿ 4ಕ್ಕೂ ಹೆಚ್ಚು ಸಿನಿಮಾಗಳು ಇವೆ. ಇದೀಗ ಅವರು 'ಪುಷ್ಪಾ: ದಿ ರೈಸ್' ರಿಲೀಸ್​ಗಾಗಿ ಕಾಯುತ್ತಿದ್ದು, ನಂತರ, ಅವರು ತಮಿಳಿನ ‘ಕಾತು ವಾಕುಲ ರೆಂದು ಕಾದಲ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ತಮಿಳು ಚಿತ್ರದಲ್ಲಿ ನಟಿ ಸಮಂತಾ ಖತೀಜಾ ಪಾತ್ರದಲ್ಲಿ ಮಿಂಚಲಿದ್ದು ಜೊತೆಗೆ ತೆಲುಗು ಚಿತ್ರ ‘ಶಾಕುಂತಲಂ’ ದಲ್ಲಿ ಟೈಟಲ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು, ನಟಿಯ ಮತ್ತೊಂದು ಹೊಸ ತೆಲುಗು ಪ್ರಾಜೆಕ್ಟ್ 'ಯಶೋದಾ' ಶೀಘ್ರದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸಲಿದೆ.