ಸಿನಿವಾಣಿ

ಆಸ್ಪತ್ರೆಯಲ್ಲಲ್ಲ, ಮನೆಯಲ್ಲಿದ್ದಾರೆ!; ವಿಜಯ್, ಸಮಂತಾ ಅಪಘಾತ ಸುದ್ದಿಗೆ ಬ್ರೇಕ್

ಕೆಲವು ದಿನಗಳ ಹಿಂದೆ ಶಿವ ನಿರ್ವಾಣ ನಿರ್ದೇಶನದ ‘ಖುಷಿ’ ಚಿತ್ರತಂಡ ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆಂದು ಬೀಡು ಬಿಟ್ಟಿತ್ತು. ಈ ಸಂದರ್ಭದಲ್ಲಿ ಸಮಂತಾ ಮತ್ತು ವಿಜಯ್ ದೇವರಕೊಂಡ ಇದ್ದ ಜೀಪ್ ನದಿಗೆ ಉರುಳಿ ಗಾಯಗೊಂಡಿದ್ದರು, ದಾಲ್ ಲೇಕ್ ಬಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಇದನ್ನು ಕೇಳಿ ಸಮಂತಾ ಮತ್ತು ವಿಜಯ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು.

ಆದರೆ, ‘ಖುಷಿ’ ನಿರ್ದೇಶಕ ಶಿವ ನಿರ್ವಾಣ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಇಬ್ಬರು ಗಾಯಗೊಂಡಿರುವುದು ದೂರ, ಅಸಲಿಗೆ ಅಪಘಾತವೇ ನಡೆದಿಲ್ಲ ಎಂದಿದ್ದಾರೆ. ‘ನಾವು ಕಳೆದ ಶನಿವಾರವೇ ಕಾಶ್ಮೀರದಿಂದ ಹೈದರಾಬಾದ್​ಗೆ ವಾಪಸ್ ಬಂದಾಗಿದೆ. ಅದರ ನಡುವೆ ಭಾನುವಾರ ಅಪಘಾತ ಆಗುವುದು ಹಾಸ್ಯಾಸ್ಪದ. ಅವರಿಬ್ಬರೂ ಮನೆಯಲ್ಲಿ ಆರಾಮವಾಗಿದ್ದಾರೆ’ ಎಂದಿದ್ದಾರೆ.

ಸದ್ಯ ಕಾಶ್ಮೀರದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಜೂನ್​ನಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸಲಿದೆ. ಈ ಪ್ಯಾನ್ ಇಂಡಿಯಾ ಚಿತ್ರವು ಡಿ. 23ಕ್ಕೆ ಬಿಡುಗಡೆಯಾಗಲಿದೆ.