ಸಿನಿವಾಣಿ

‘ಬಿಗ್ ಬಾಸ್’ ಮನೆಯ ಅನುಭವ ಆಗ್ತಿದೆ ... ಫಾರ್ಮ್‌ಹೌಸ್‌ನಲ್ಲಿ ಸಿಲುಕಿರುವ ಸಲ್ಮಾನ್ ಮನದ ಮಾತು

ಸಲ್ಮಾನ್ ಖಾನ್ ಇದುವರೆಗೂ ‘ಬಿಗ್ ಬಾಸ್’ನ ಹಲವು ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಕಾರ್ಯಕ್ರಮ ನಡೆಸಿಕೊಡುವಾಗ, ಆಗಾಗ ‘ಬಿಗ್ ಬಾಸ್’ ಮನೆಯೊಳಗೆ ಹೋಗುವುದೂ ಉಂಟು. ಹೋಗಿ ಬಂದೂ ಮಾಡುತ್ತಿದ್ದರೆ ವಿನಃ ಯಾವತ್ತೂ ಅವರು ಅಲ್ಲಿ ಹೆಚ್ಚು ಕಾಲ ಇರಲಿಲ್ಲ. ಇದೀಗ ಲಾಕ್‌ಡೌನ್‌ನಿಂದ ಮನೆಯಲ್ಲಿರುವುದು ನಿಜಕ್ಕೂ ‘ಬಿಗ್ ಬಾಸ್’ ಮನೆಯ ಅನುಭವ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಕಳೆದ ತಿಂಗಳು ಪನ್ವೇಲ್‌ನ ತಮ್ಮ ಫಾರ್ಮ್‌ಹೌಸ್‌ಗೆ ಹೋಗಿದ್ದರು. ಈ ಮಧ್ಯೆ, ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಯಿತು. ಇದರಿಂದ ಅವರು ಮುಂಬೈಗೆ ಬರದೇ ಫಾರ್ಮ್‌ಹೌಸ್‌ನಲ್ಲೇ ಸಿಕ್ಕಿಬಿದ್ದರು. ಒಂದೇ ಕಡೆ ಇದ್ದೂ ಇದ್ದೂ ಸಾಕಾಗಿದೆ ಎಂದು ಕೆಲವು ದಿನಗಳ ಹಿಂದೆ ಬೇಸರಿಸಿಕೊಂಡಿದ್ದರು. ಎಷ್ಟೋ ದಿನಗಳಿಂದ ತಂದೆಯನ್ನು ಕಾಣದೆ ದುಃಖವಾಗುತ್ತಿದೆ ಎಂದಿದ್ದರು. ಇದೀಗ ಸಂದರ್ಶನವೊಂದರಲ್ಲಿ, ಒಂದೇ ಸಮನೆ ಫಾರ್ಮ್‌ಹೌಸ್‌ನಲ್ಲಿದ್ದು, ‘ಬಿಗ್ ಬಾಸ್’ ಮನೆಯಲ್ಲಿರುವ ಅನುಭವವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಲಾಕ್‌ಡೌನ್ ಇದ್ದರೂ ಮನೆಯಲ್ಲಿದ್ದುಕೊಂಡೇ ಕೆಲಸ ಮಾಡುತ್ತಿದ್ದೇನೆ. ಆದರೆ, ಇಲ್ಲಿ ‘ಬಿಗ್ ಬಾಸ್’ ಮನೆಯಲ್ಲಿರುವ ಅನುಭವವಾಗುತ್ತಿದೆ. ಒಂದೇ ವ್ಯತ್ಯಾಸವೆಂದರೆ, ಇಲ್ಲಿ ಯಾರೂ ಎಲಿಮಿನೇಟ್ ಆಗುತ್ತಿಲ್ಲ ಮತ್ತು ಯಾರೂ ಯಾರ ಕಾಲನ್ನೂ ಎಳೆಯುತ್ತಿಲ್ಲ. ತಾಯಿ ಮತ್ತು ಸಂಬಂಧಿಕರ ಜತೆಗೆ ಸುಂದರವಾದ ಕ್ಷಣಗಳನ್ನು ಕಳೆಯುತ್ತಿದ್ದೇನೆ. ಅಪ್ಪನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸಲ್ಮಾನ್ ಹೇಳಿದ್ದಾರೆ.