ಸಿನಿವಾಣಿ

MeToo ಪ್ರಕರಣ ಬಾಲಿವುಡ್​ನಲ್ಲಿ ಹೊರಬರುವುದಿಲ್ಲ; ಸಲ್ಮಾನ್​ಖಾನ್​ ಮಾಜಿ ಗೆಳತಿ ಹೀಗೆಂದಿದ್ದೇಕೆ?

ಮುಂಬೈ: ಹೇಮಾ ಸಮಿತಿ ವರದಿ ಬಂದ ಬಳಿಕ ಸಿನಿಮಾರಂಗದ ಹಲವು ನಟಿಯರು ತಾವು ಅನುಭವಿಸಿದ ಹಾಗೂ ಸಿನಿಮಾ ಸೆಟ್​ನಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗಪಡಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಹೆಚ್ಚು ಎಂದು ಸೌತ್ ಸೂಪರ್ ಸ್ಟಾರ್ ಮೋಹನ್ ಲಾಲ್ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ಭಾಯಿಜಾನ್​​ ಸಲ್ಮಾನ್​ಖಾನ್​​​ ಮಾಜಿ ಗೆಳತಿ ಹಾಗೂ ನಟಿ ಸೋಮಿ ಅಲಿ ಬಾಲಿವುಡ್​ನಲ್ಲಿರುವ ಸಂಸ್ಕೃತಿಯಿಂದಾಗಿ ಇಂತಹ ವಿಷಯಗಳು ಹೊರಬರುವುದಿಲ್ಲ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ನಾನು ವೈಯಕ್ತಿಕವಾಗಿ #MeToo ಘಟನೆಗಳನ್ನು ಎದುರಿಸಿದ್ದೇನೆ. ಕೇರಳದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಮನರಂಜನಾ ಉದ್ಯಮದಲ್ಲಿರುವ ಮಹಿಳೆಯರಿಗೆ ಈ ಸತ್ಯದ ಅರಿವಿದೆ ಎಂದು ಹೇಳಿದ ಅವರು ತಾವು ನಟಿಸುವಾಗ ಅನುಭವಿಸಿದ ಘಟನೆಗಳನ್ನು ತಿಳಿಸಿದರು.

ಬಾಲಿವುಡ್​ನಲ್ಲಿರುವ ಹೀರೋಗಳ ಆರಾಧನಾ ಭಾವನೆಯಿಂದ ಇಂತಹ ವಿಚಾರಗಳನ್ನು ರಹಸ್ಯವಾಗಿ ಇಡಲಾಗುತ್ತದೆ. ಸಿನಿಮಾರಂಗದಲ್ಲಿ ವೃತ್ತಿಜೀವನ ಮುನ್ನಡೆಸಬೇಕಾದರೆ ನಿರ್ದಿಷ್ಟ ವ್ಯಕ್ತಿಯ ರೂಮ್​ಗೆ ಹೋಗುವುದು ಅಗತ್ಯವಾಗಿದೆ. ಇಂತಹ ಲೈಂಗಿಕ ದೌರ್ಜನ್ಯಗಳು ಬಾಲಿವುಡ್​ನಲ್ಲಿ ಆಳವಾಗಿ ಬೇರೂರಿದೆ. ವೃತ್ತಿಯಲ್ಲಿ ಸಿಗುವ ಅವಕಾಶಗಳು ಕಡಿಮೆ ಆಗುತ್ತವೆ, ಪ್ರತೀಕಾರ ತಿರಿಸಿಕೊಳ್ಳುತ್ತಾರೆ ಎಂಬ ಭಯ, ಬಹಿಷ್ಕಾರ ಹಾಕುತ್ತಾರೆ ಎಂಬ ಕಾರಣಗಳಿಗೆ ಇದರ ವಿರುದ್ಧವಾಗಿ ಧ್ವನಿ ಎತ್ತುವುದಿಲ್ಲ ಅಷ್ಟೆ ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ ದಿವಂಗತ ನಟಿ ದಿವ್ಯಾ ಭಾರ್ತಿ ಅವರ ಬಗ್ಗೆ ಮಾತನಾಡಿದ ಅವರು, ಆಕೆಯ ಸಾವು ಹೃದಯ ವಿದ್ರಾವಕ ರಹಸ್ಯಗಳಲ್ಲಿ ಒಂದಾಗಿದೆ. ಕೆಲವು ಗೊಂದಲದ ಸಂದರ್ಭಗಳಿಂದಾಗಿ ಒತ್ತಡಕ್ಕೆ ಒಳಗಾಗಿರುವುದಾಗಿ ದಿವ್ಯಾ ಸಾವಿಗೆ ಮುನ್ನ ನನ್ನ ಬಳಿ ಹೇಳಿದ್ದಳು. ತುಂಬಾ ಅಸಮಾಧಾನದಿಂದಲೇ ವಿದೇಶಕ್ಕೆ ಹೋಗುವ ಯೋಜನೆ ಇದೆ ಎಂದು ತಿಳಿಸಿದ್ದಾಗಿ ಸೋಮಿ ಹೇಳಿದ್ದಾಳೆ.

ನಾನು ನಟಿಸುತ್ತಿದ್ದ ಸಮಯದಲ್ಲಿ ಇದೆಲ್ಲದರ ವಿರುದ್ಧ ಧ್ವನಿ ಎತ್ತುವ ಮಹಿಳೆಯರಿಗೆ ಬೆಂಬಲ ಸಿಗಲಿಲ್ಲ. ಕೇರಳವೇ ಆಗಿರಲಿ ಅಥವಾ ಇನ್ನಾವುದೇ ಉದ್ಯಮವೇ ಆಗಿರಲಿ ಈ ರೀತಿಯ ಲೈಂಕಗಿ ದೌರ್ಜನ್ಯವನ್ನು ತಡೆಯಲು ತಕ್ಷಣದ ಬದಲಾವಣೆಯ ಅಗತ್ಯವಿದೆ ಎಂದು ತಿಳಿಸಿದರು.(ಏಜೆನ್ಸೀಸ್​​)