ಸಿನಿವಾಣಿ

ಸಮರಕ್ಕೆ ಸಜ್ಜಾದ ಸಲ್ಮಾನ್;​ "ಬ್ಯಾಟಲ್​ ಆಫ್​ ಗಲ್ವಾನ್​' ಫಸ್ಟ್​ ಲುಕ್​ ಬಿಡುಗಡೆ

ಕರೊನಾ ಲಾಕ್​ಡೌನ್​ನಲ್ಲಿ ಸಿಲುಕಿ ಅದಾಗಲೇ ದೇಶಾದ್ಯಂತ ಜನ ಸಮಸ್ಯೆಗೆ ಸಿಲುಕಿದ್ದರೆ, ಅದರ ನಡುವೆಯೇ ಚೀನಾ ಸೈನಿಕರು ಗಡಿಭಾಗದಲ್ಲಿ ಕಿರಿಕ್​ ತೆಗೆದಿದ್ದರು. 2020ರ ಜೂನ್​ 15ರಂದು ಗಲ್ವಾನ್​ನಲ್ಲಿ ಭಾರತದ ಗಡಿಯೊಳಗೆ ಬಂದು ಟೆಂಟ್​ ಹಾಕುತ್ತಿದ್ದ ಚೀನಾ ಸೈನಿಕರನ್ನು ಭಾರತದ ಸೈನಿಕರು ಹಿಮ್ಮೆಟ್ಟಿಸಿದ್ದರು. ಆ ಸಂದರ್ಭದಲ್ಲಿ 16 ಬಿಹಾರ್​ ರೆಜಿಮೆಂಟ್​ನ ಕಮಾಂಡಿಂಗ್​ ಆಫೀಸರ್​ ಸಂತೋಷ್​ ಬಾಬು ಸೇರಿ 20 ಭಾರತೀಯ ಸೈನಿಕರು ವೀರಮರಣವನ್ನಿಪ್ಪಿದ್ದರು. ಹಾಗೇ 40ಕ್ಕೂ ಹೆಚ್ಚು ಚೀನಾ ಸೈನಿಕರನ್ನೂ ಸದೆಬಡಿದಿದ್ದರು.

ಆ ಘಟನೆಗಳ ಕುರಿತು ಬಾಲಿವುಡ್​ ನಟ ಸಲ್ಮಾನ್​ ಖಾನ್​ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೆಲ ತಿಂಗಳಿನಿಂದ ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿತ್ತು. ಅದೀಗ ಟೀಸರ್​ ಮೂಲಕ ಪಕ್ಕಾ ಆಗಿದ್ದು, "ಶೂಟೌಟ್​ ಅಟ್​ ಲೋಖಂಡ್ವಾಲಾ', "ಹಸೀನಾ ಪಾರ್ಕರ್​' ಖ್ಯಾತಿಯ ಅಪೂರ್ವ ಲಾಖಿಯಾ ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. "ಬ್ಯಾಟಲ್​ ಆಫ್​ ಗಲ್ವಾನ್​' ಎಂದು ಟೈಟಲ್​ ಇಡಲಾಗಿದೆ.

ಕಮಾಂಡಿಂಗ್​ ಆಫೀಸರ್​ ಸಂತೋಷ್​ ಬಾಬು ಪಾತ್ರದಲ್ಲಿ ಸಲ್ಮಾನ್​ ಖಾನ್​ ನಟಿಸುತ್ತಿದ್ದಾರೆ ಎನ್ನಲಾಗಿದೆ. ಸ್ಟ್​ ಲುಕ್​ ಟೀಸರ್​ನಲ್ಲಿ ರಕ್ತಸಿಕ್ತ ಲುಕ್​ನಲ್ಲಿ ಕಾಣಿಸಿಕೊಂಡಿರುವ ಅವರು, ಚಿತ್ರದ ಬಗ್ಗೆ ಕುತೂಹಲ, ನಿರೀಕ್ಷೆ ಹೆಚ್ಚಿಸಿದ್ದಾರೆ. ಸಮುದ್ರಮಟ್ಟಕ್ಕಿಂತ 15 ಸಾವಿರ ಅಡಿ ಎತ್ತರದಲ್ಲಿರುವ ಗಲ್ವಾನ್​ ಕಣಿವೆಯಲ್ಲೇ ಚಿತ್ರದ ಶೂಟಿಂಗ್​ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಹಾಗೇ ಪಾತ್ರಕ್ಕಾಗಿ ಸಲ್ಮಾನ್​ ಕೂಡ ತೂಕ ಕಡಿಮೆ ಮಾಡಿಕೊಂಡಿದ್ದಾರೆ.