Salman Khan (ಚಿತ್ರ X) 
ಸಿನಿವಾಣಿ

ಬಾಂದ್ರಾ ಅಪಾರ್ಟ್‌ಮೆಂಟ್ ಮಾರಾಟ ಮಾಡಿದ ಸಲ್ಮಾನ್ ಖಾನ್​!...ಅದರ ಮೌಲ್ಯ ಎಷ್ಟು ಕೋಟಿ ಗೊತ್ತಾ..? Salman Khan

Salman Khan: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕಳೆದ ಐದು ದಶಕಗಳಿಂದ ತಾವು ನೆಲೆಸಿದ್ದ ಪ್ರಸಿದ್ಧ 'ಗ್ಯಾಲಕ್ಸಿ ಅಪಾರ್ಟ್‌ಮೆಂಟ್' ತೊರೆದು ಬಾಂದ್ರಾದ ಆರು ಅಂತಸ್ತಿನ ನೂತನ ಐಷಾರಾಮಿ ಬಂಗಲೆಗೆ ಸ್ಥಳಾಂತರಿಸಲಿದ್ದಾರೆ ಎಂಬ ಸುದ್ದಿ ಹೊರಬಂದ ಬೆನ್ನಲ್ಲೇ, ತಮ್ಮ ಮತ್ತೊಂದು ಬೆಲೆಬಾಳುವ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಮುಂಬೈನ ಪ್ರಮುಖ ಪ್ರದೇಶವಾದ ಬಾಂದ್ರಾ ವೆಸ್ಟ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್ ಅನ್ನು ನಟ 3.50 ಕೋಟಿಗೆ ಮಾರಾಟ ಮಾಡುವ ಮೂಲಕ ರಿಯಲ್ ಎಸ್ಟೇಟ್ ವಲಯದಲ್ಲಿ ಗಮನ ಸೆಳೆದಿದ್ದಾರೆ.
ರಿಯಲ್ ಎಸ್ಟೇಟ್ ಮಾಹಿತಿ ಸಂಸ್ಥೆ 'CRE ಮ್ಯಾಟ್ರಿಕ್ಸ್' ನೀಡಿದ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಸಲ್ಮಾನ್ ಖಾನ್ ಈ ಆಸ್ತಿಯನ್ನು 2015 ರಲ್ಲಿ 2.88 ಕೋಟಿಗೆ ಖರೀದಿಸಿದ್ದರು. ಇದೀಗ ಅದನ್ನು 3.50 ಕೋಟಿಗೆ ಮಾರಾಟ ಮಾಡುವ ಮೂಲಕ ತಮ್ಮ ಹೂಡಿಕೆಯಲ್ಲಿ ಉತ್ತಮ ಲಾಭ ಗಳಿಸಿದ್ದಾರೆ. 758 ಚದರ ಅಡಿ ಕಾರ್ಪೆಟ್ ವಿಸ್ತೀರ್ಣ ಹೊಂದಿರುವ ಈ ಮನೆಗೆ ಪ್ರತಿ ಚದರ ಅಡಿಗೆ ಸುಮಾರು 46,000 ದರ ನಿಗದಿಯಾಗಿದ್ದು, ಎರಡು ಕಾರು ಪಾರ್ಕಿಂಗ್ ಸ್ಥಳಗಳೂ ಇದರ ವ್ಯಾಪ್ತಿಗೆ ಬರಲಿವೆ.
ಖರೀದಿದಾರರು ಜುಲೈ 9, 2026 ರಂದು ಈ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ್ದು, 21 ಲಕ್ಷ ಸ್ಟಾಂಪ್ ಡ್ಯೂಟಿ ಹಾಗೂ 30,000 ನೋಂದಣಿ ಶುಲ್ಕ ಪಾವತಿಸಿದ್ದಾರೆ. ತದನಂತರ ಜುಲೈ 23, 2026 ರಂದು ಅಧಿಕೃತ ವರ್ಗಾವಣೆ ಪತ್ರಕ್ಕೆ ಸಹಿ ಹಾಕುವ ಮೂಲಕ ಆಸ್ತಿಯ ಸಂಪೂರ್ಣ ಮಾಲೀಕತ್ವ ಹಸ್ತಾಂತರಗೊಂಡಿದೆ. ಸಲ್ಮಾನ್ ಖಾನ್ ಅವರು ಪ್ರಸ್ತುತ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್‌ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದು, ವಾಣಿಜ್ಯ ಹಾಗೂ ವಸತಿ ರಿಯಲ್ ಎಸ್ಟೇಟ್‌ಗಳಲ್ಲಿ ಹಲವು ಹೂಡಿಕೆಗಳನ್ನು ಹೊಂದಿದ್ದಾರೆ.
ಅಂದಹಾಗೇ, ಜುಲೈ 2025 ರಲ್ಲಿ, ಸಲ್ಮಾನ್ ಖಾನ್ ಮುಂಬೈನ ದುಬಾರಿ ಬಾಂದ್ರಾ ಪಶ್ಚಿಮ ಪ್ರದೇಶದಲ್ಲಿ 1,318 ಚದರ ಅಡಿ ಅಪಾರ್ಟ್‌ಮೆಂಟ್ ಅನ್ನು 5.35 ಕೋಟಿಗೆ ಮಾರಾಟ ಮಾಡಿದರು ಎಂದು ಸ್ಕ್ವೇರ್​ ಯಾರ್ಡ್​ ಪರಿಶೀಲಿಸಿದ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಸಲ್ಮಾನ್ ಖಾನ್ ಮಾರಾಟ ಮಾಡಿದ ಅಪಾರ್ಟ್‌ಮೆಂಟ್ 122.45 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ.
ಜೂನ್ 2026 ರಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಪ್ರಮುಖ ಕಾರಣಕ್ಕಾಗಿ ಸುದ್ದಿಯಲ್ಲಿದ್ದರು. 1974 ರಿಂದ ತಾವು ವಾಸಿಸುತ್ತಿರುವ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್‌ನಿಂದ ಕೇವಲ ಕೆಲವು ನೂರು ಮೀಟರ್ ಅಂತರದಲ್ಲಿರುವ ಬಾಂದ್ರಾದ ಚಿಂಬೈ ಪ್ರದೇಶದಲ್ಲಿ ನೂತನ ವಸತಿ ಗೋಪುರ ನಿರ್ಮಿಸಲು ಅವರಿಗೆ ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದಿಂದ (MCZMA) ಅಧಿಕೃತ ಮಂಜೂರಾತಿ ದೊರೆತಿತ್ತು.

ಬಾಲಿವುಡ್ ತಾರೆಗಳ ನೆಚ್ಚಿನ ತಾಣ ಬಾಂದ್ರಾ ವೆಸ್ಟ್

ಮುಂಬೈನ ಬಾಂದ್ರಾ ವೆಸ್ಟ್, ಅದರಲ್ಲೂ ವಿಶೇಷವಾಗಿ ಪಾಲಿ ಹಿಲ್, ಬ್ಯಾಂಡ್‌ಸ್ಟ್ಯಾಂಡ್ ಮತ್ತು ಕಾರ್ಟರ್ ರೋಡ್‌ಗಳಂತಹ ಪ್ರದೇಶಗಳು ಸುದೀರ್ಘ ಕಾಲದಿಂದಲೂ ಬಾಲಿವುಡ್ ಚಿತ್ರರಂಗದ ತಾರೆಗಳ ನೆಚ್ಚಿನ ವಾಸಸ್ಥಳಗಳಾಗಿ ಗುರುತಿಸಿಕೊಂಡಿವೆ. ಈ ಐಷಾರಾಮಿ ವ್ಯಾಪ್ತಿಯು ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ಜಾವೇದ್ ಅಖ್ತರ್, ಶಬಾನಾ ಅಜ್ಮಿ, ರೇಖಾ ಹಾಗೂ ಸಂಜಯ್ ದತ್ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ದಿಗ್ಗಜರ ನಿವಾಸಗಳಿಗೆ ಸಾಕ್ಷಿಯಾಗಿದೆ (ಏಜೆನ್ಸೀಸ್​).