Salman Khan : ದುಬಾರಿ ಸಂಭಾವನೆಯ ಕಾರಣಕ್ಕೆ ಒಂದೇ ಸಿನಿಮಾದಲ್ಲಿ ಮೂವರು ಖಾನ್‌ಗಳನ್ನು ಒಟ್ಟಿಗೆ ಸೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಹೇಳಿದರು.
ತಮ್ಮ ಮುಂಬರುವ 'ಸಿಕಂದರ್' ಸಿನಿಮಾದ ಬಿಡುಗಡೆಗೂ ಮುನ್ನ ಇತ್ತೀಚೆಗೆ ಮುಂಬೈನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಬಾಲಿವುಡ್ ಸುಲ್ತಾನ್, ತಮ್ಮ ಸಮಕಾಲೀನ ನಟರಾದ ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಜತೆ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದರು.
ಎಲ್ಲವೂ ಚಿತ್ರಕಥೆಯನ್ನು ಅವಲಂಬಿಸಿರುತ್ತದೆ. ನಮಗೆ ಅಂತಹ ಸ್ಕ್ರಿಪ್ಟ್ ಸಿಕ್ಕರೆ, ನಾವು ಒಟ್ಟಿಗೆ ಕೆಲಸ ಮಾಡಲು ಬಯಸುತ್ತೇವೆ. ಆದರೆ, ಇಲ್ಲಿಯವರೆಗೆ ಯಾರೊಬ್ಬರು ನಮ್ಮ ಮೂವರಿಗೂ ಒಟ್ಟಿಗೆ ನಟಿಸುವ ಆಫರ್ ನೀಡಿಲ್ಲ. ಅಲ್ಲದೆ, ನಾವು ಒಟ್ಟಿಗೆ ಬಂದರೆ, ಅದು ದೊಡ್ಡ ಚಿತ್ರವಾಗಲಿದೆ ಮತ್ತು ನಿರ್ದೇಶಕರಿಗೆ ದೊಡ್ಡ ಜವಾಬ್ದಾರಿಯೂ ಆಗಲಿದೆ. ಇದಿಷ್ಟೇ ಅಲ್ಲದೆ, ಚಿತ್ರದ ಬಜೆಟ್ ದೊಡ್ಡದಾಗಿರುತ್ತದೆ. ಆದ್ದರಿಂದ, ಯಾರೂ ನಮ್ಮೊಂದಿಗೆ ಚಿತ್ರ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದರು.
ಅಂದಹಾಗೆ ಸಲ್ಮಾನ್ ಖಾನ್ ಅವರು ಈಗಾಗಲೇ ತಮ್ಮ ಮುಂಬರುವ ಪ್ರಾಜೆಕ್ಟ್ಗಳನ್ನು ಅಂತಿಮಗೊಳಿಸಿದ್ದಾರೆ. ಅಲ್ಲದೆ, ಅವರು ಇನ್ನೂ ಹೆಸರಿಡದ ಅಟ್ಲೀ ನಿರ್ದೇಶನದ ಚಿತ್ರಕ್ಕೆ ಹೊಸ ದಿನಾಂಕವನ್ನು ನಿರ್ಧರಿಸಬೇಕಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವುದು ಕೂಡ ಒಟ್ಟಿಗೆ ಸಿನಿಮಾ ಮಾಡದಿರಲು ಕಾರಣವಾಗಿದೆ ಎಂದು ಸಲ್ಮಾನ್ ಇದೇ ಸಂದರ್ಭದಲ್ಲಿ ಹೇಳಿದರು. ಭವಿಷ್ಯದಲ್ಲಿ ಸಾಧ್ಯವಾದರೆ ಒಟ್ಟಿಗೆ ನಟಿಸುವುದಾಗಿ ಹೇಳಿದರು.
ಸದ್ಯ ಸಲ್ಮಾನ್ ಖಾನ್ ಅವರು ಎಆರ್ ಮುರುಗದಾಸ್ ನಿರ್ದೇಶನದ ತಮ್ಮ ಮುಂಬರುವ ಚಿತ್ರ ಸಿಕಂದರ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಚಿತ್ರ ಮಾರ್ಚ್ 30, ಭಾನುವಾರದಂದು ಈದ್ ಹಬ್ಬಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್)