ಸಿನಿವಾಣಿ

'ಏಂಟಮ್ಮ' ಎಂದು ಲುಂಗಿ ಡ್ಯಾನ್ಸ್​ ಮಾಡಿದ ಸಲ್ಮಾನ್​, ರಾಮ್​ಚರಣ್​ ಮತ್ತು ವೆಂಕಟೇಶ್​

ಮುಂಬೈ: ಸಲ್ಮಾನ್​ ಖಾನ್ ಅಭಿನಯದ 'ಕಿಸಿ ಕಾ ಭಾಯ್​ ಕಿಸಿ ಕೀ ಜಾನ್​' ಚಿತ್ರದ ಚಿತ್ರೀಕರಣ ಮುಗಿದಿದ್ದು, ಏಪ್ರಿಲ್​ 21ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಮಂಗಳವಾರ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಸಲ್ಮಾನ್​ ಖಾನ್​ ಪಂಚೆ ಉಟ್ಟು ಸಖತ್​ ಹೆಜ್ಜೆ ಹಾಕಿದ್ದಾರೆ.

ಪಕ್ಕಾ ತೆಲುಗು ಹಾಡಿನಂತಿರುವ 'ಏಂಟಮ್ಮ ಏಂಟಮ್ಮ' ಎಂಬ ಈ ಹಾಡಿನಲ್ಲಿ ಸಲ್ಮಾನ್​ ಖಾನ್​, ಪೂಜಾ ಹೆಗ್ಡೆ ಮತ್ತು ಟಾಲಿವುಡ್​ ನಟ ವೆಂಕಟೇಶ್​ ಹೆಜ್ಜೆ ಹಾಕಿದ್ದು, ಅತಿಥಿ ಪಾತ್ರದಲ್ಲಿ ರಾಮ್​ಚರಣ್​ ತೇಜ ಸಹ ಕಾಣಿಸಿಕೊಂಡಿದ್ದಾರೆ.

ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಲುಂಗಿ ಡ್ಯಾನ್ಸ್​' ನೆನಪಿಸುವ ಈ ಹಾಡಿಗೆ ವಿಶಾಲ್​ ದಾದ್ಲಾನಿ ಮತ್ತು ಪಾಯಲ್​ ದೇವ್​ ಹಾಡಿದ್ದು, ಬೃಹತ್​ ಸೆಟ್​ವೊಂದರಲ್ಲಿ ನೂರಾರು ಡ್ಯಾನ್ಸರ್ಸ್​ ನಡುವೆ ಈ ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ.

'ಕಿಸಿ ಕಾ ಭಾಯ್​ ಕಿಸಿ ಕೀ ಜಾನ್​' ಚಿತ್ರವು ತಮಿಳಿನ 'ವೀರಂ' ಚಿತ್ರದ ರೀಮೇಕ್​ ಆಗಿದ್ದು, ಈ ಹಿಂದೆ 'ಬಚ್ಚನ್​ ಪಾಂಡೇ' ಚಿತ್ರವನ್ನು ನಿರ್ದೇಶಿಸಿದ್ದ ಫರ್ಹಾದ್​ ಸಾಮ್ಜಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಲ್ಮಾನ್​ಗೆ ನಾತಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದು, ತೆಲುಗಿನ ವೆಂಕಟೇಶ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.