ಮುಂಬೈ: ದುಬೈನಿಂದ ಇಸ್ರೇಲ್ ಗೆ ಪ್ರಯಾಣ ಬೆಳೆಸಿದ್ದ ಫ್ಲೈದುಬೈ (flydubai) ವಿಮಾನ FZ1073 ದ ಕಾಕ್‌ಪಿಟ್‌ನಲ್ಲಿ ನಡೆದ ಹಲ್ಲೆ ಹಾಗೂ ವಿಮಾನ ಹೈಜಾಕ್ ವಿಫಲ ಯತ್ನದ ಘಟನೆ ಈಗ ಪ್ರಪಂಚದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸಹ ಪೈಲಟ್ನಿಂದ, ಮಾರಣಾಂತಿಕ ದಾಳಿಗೊಳಗಾದರೂ, ಪ್ರಾಣವನ್ನು ಪಣಕ್ಕಿಟ್ಟು ಸುಮಾರು 180 ಪ್ರಯಾಣಿಕರ ಪ್ರಾಣವನ್ನು ರಕ್ಷಿಸಿದ ಭಾರತ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸವನ್ನು ವಿಶ್ವವೇ ಕೊಂಡಾಡುತ್ತಿದೆ. ಈಗ, ಸ್ಮಿತ್ ಮಚ್ಚಾರ್ ಸಾಹಸವನ್ನು ಮೆಚ್ಚಿರುವ ಬಾಲಿವುಡ್ ನಟ, ಭಾಯ್‌ಜಾನ್ ಖ್ಯಾತಿಯ ಸಲ್ಮಾನ್ ಖಾನ್ ಮುಕ್ತಕಂಠದಿಂದ ಸ್ಮಿತ್ ಅವರನ್ನು ಹೊಗಳಿದ್ದಾರೆ.
ಫ್ಲೈದುಬೈ ವಿಮಾನದಲ್ಲಿ ನಡೆದ ಘಟನೆ ಹಾಗೂ ಅಲ್ಲಿ ಕ್ಯಾಪ್ಟನ್ ಮಚ್ಚಾರ್ ತೋರಿದ ಸಾಹಸವನ್ನು ಸಲ್ಲು ಭಾಯ್ ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ನಲ್ಲಿ ನಟ ಟ್ವಿಟ್ ಮಾಡುವ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಪೈಲಟ್ ಸರ್ ನೀವು ದೊಡ್ಡ ಚಮತ್ಕಾರವನ್ನೇ ಮಾಡಿದ್ದಿರಿ, ನಿಮ್ಮ ಸಾಹಸಕ್ಕೆ ನಾವೆಲ್ಲರೂ ಹೆಮ್ಮೆಯಿಂದ ಸೆಲ್ಯೂಟ್ ಮಾಡುತ್ತೇವೆ. ನಿಮ್ಮ ಜೊತೆ ವಿಮಾನದಲ್ಲಿ ಹಾರಾಟ ನಡೆಸಿದರೆ ಖಂಡಿತವಾಗಿ ಸಂತೋಷ ಲಭಿಸಲಿದೆ. ವೆನ್ ಡನ್ ಬ್ರೋ, ಕ್ಯಾಪ್ಟನ್ ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.
ಎಕ್ಸ್ (X) ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಅತ್ಯಂತ ಗಂಭೀರ ಅಪಾಯದ ಪರಿಸ್ಥಿತಿಯಲ್ಲಿ ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅಪಾರ ಧೈರ್ಯವನ್ನು ಹಾಗೂ ಇತರರ ಪ್ರಾಣ ರಕ್ಷಿಸುವ ದೃಢ ಸಂಕಲ್ಪವನ್ನು ಪ್ರದರ್ಶಿಸಿದರು. ಅವರ ಶೌರ್ಯವು ನೂರಾರು ಜೀವಗಳನ್ನು ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿತು. ಕ್ಯಾಪ್ಟನ್ ಮಚ್ಚಾರ್ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್ 30 ರಂದು ದುಬೈನಿಂದ ಇಸ್ರೇಲ್‌ಗೆ ಪ್ರಯಾಣ ಬೆಳಿಸಿದ್ದ ಫ್ಲೈದುಬೈ (flydubai) ವಿಮಾನ FZ1073 ರ ಕಾಕ್‌ಪಿಟ್‌ನಲ್ಲಿ, ವಿಮಾನದ ಕ್ಯಾಪ್ಟನ್ ಆಗಿದ್ದ ಭಾರತ ಮೂಲದ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಓಮನ್ ಮೂಲದ ಸಹ-ಪೈಲಟ್ ಚಾಕುವಿನಿಂದ ದಾಳಿ ಮಾಡಿ 9/11 ಮಾದರಿಯ ಉಗ್ರಕೃತ್ಯಕ್ಕೆ ಸಂಚನ್ನು ರೂಪಿಸಿದ್ದ.
ಸಹ- ಪೈಲಟ್ನಿಂದಲೇ ದಾಳಿ ನಡೆದು ರಕ್ತಸಿಕ್ತವಾಗಿದ್ದರೂ ಕ್ಯಾಪ್ಟನ್ ಮಚ್ಚಾರ್, ಹರ ಸಾಹಸ ಪಟ್ಟು, ಕಾಕ್ಪಿಟ್ ಬಾಗಿಲನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ ವಿಮಾನ ಕೇವಲ 30 ಸೆಕೆಂಡ್ಗಳಲ್ಲಿ ಸುಮಾರು 13 ಸಾವಿರ ಅಡಿ ಕುಸಿದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಾಕ್ಪಿಟ್ ಬಾಗಿಲು ತೆರೆದ ನಂತರ ಪ್ರಯಾಣಿಕರು, ಅಲ್ಲಿಗೆ ಧಾವಿಸಿ, ಆ ಸಹ ಪೈಲಟ್ನನ್ನು ವಶಕ್ಕೆ ತೆಗೆದುಕೊಂಡು, ಗಾಯಗೊಂಡಿದ್ದ ಮಚ್ಚಾರ್ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ನಂತರ ಸಹಾಯಕ ಪೈಲಟ್ಗಳು ವಿಮಾನವನ್ನು ತಮ್ಮ ಹತೋಟಿಗೆ ತೆಗೆದುಕೊಂಡು, ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರು, (ಏಜೆನ್ಸೀಸ್).