ಬೆಂಗಳೂರು: ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು, ಪ್ರಭಾಸ್ ಅಭಿನಯದಲ್ಲಿ ‘ಸಲಾರ್’ ಎಂಬ ಚಿತ್ರವನ್ನು ನಿರ್ವಿುಸುತ್ತಿರುವುದು ಗೊತ್ತೇ ಇದೆ. ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸಹ ಸುದ್ದಿಯಾಗಿದೆ. ಈ ಚಿತ್ರದ ಮುಹೂರ್ತ ಶುಕ್ರವಾರ ಹೈದರಾಬಾದ್ನಲ್ಲಿ ನೆರವೇರಿದ್ದು ಕನ್ನಡ ಮತ್ತು ತೆಲುಗು ಚಿತ್ರರಂಗದ ಹಲವು ಗಣ್ಯರು ಇದಕ್ಕೆ ಸಾಕ್ಷಿಯಾಗಿದ್ದಾರೆ.
‘ಸಲಾರ್’ ಚಿತ್ರದ ಮುಹೂರ್ತ ಹೈದರಾಬಾದ್ನ ರಾಮಾನಾಯ್ಡು ಸ್ಟುಡಿಯೋಸ್ನಲ್ಲಿ ನಡೆದಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್, ನಟ ಯಶ್ ಸೇರಿ ಹಲವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ್, ‘‘ಕೆಜಿಎಫ್’ ಸರಣಿ ಚಿತ್ರಗಳ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗವನ್ನು ನೋಡುವಂತೆ ಪ್ರಶಾಂತ್ ಮಾಡಿದ್ದು, ಇದೀಗ ಪ್ರಭಾಸ್ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದು ಸಂತೋಷದ ವಿಷಯ. ಈ ಮೂಲಕ ಭಾಷೆ ಮತ್ತು ಗಡಿಗಳನ್ನು ಮೀರಿ ಕನ್ನಡ- ತೆಲುಗು ಚಿತ್ರರಂಗಗಳು ಒಂದಾಗಿ ಮುಂದೆ ಹೋಗುತ್ತಿರುವುದಕ್ಕೆ ಆನಂದವಾಗಿದೆ. ಈ ಚಿತ್ರದಿಂದ ಪ್ರಭಾಸ್ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ’ ಎಂದು ಅವರು ಹೇಳಿದ್ದಾರೆ.
ನಿರ್ಮಾಪಕ ವಿಜಯ್ ಕಿರಗಂದೂರು, ‘ಬಾಹುಬಲಿ’ ಚಿತ್ರ ನೋಡಿ ಪ್ರಭಾಸ್ ಅಭಿನಯಕ್ಕೆ ಮರುಳಾಗಿದ್ದರಂತೆ. ಇದೀಗ ಅವರ ಜತೆಗೆ ಚಿತ್ರ ಮಾಡುತ್ತಿರುವುದು ಬಹಳ ಖುಷಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ‘ರಾಧೇ ಶ್ಯಾಮ್ ಚಿತ್ರದ ಕೊನೆಯ ಹಂತದಲ್ಲಿ ತೊಡಗಿಸಿ ಕೊಂಡಿರುವ ಪ್ರಭಾಸ್, ಆ ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ, ಮುಂದಿನ ತಿಂಗಳನಿಂದ ‘ಸಲಾರ್’ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.