ಸಿನಿವಾಣಿ

ಸಲಗ ಸಂಭ್ರಮ; ಆನೆ ಕಥೆ ಕೇಳಿ ಗದ್ಗದಿತರಾದ ವಿಜಯ್

ಬೆಂಗಳೂರು: ‘ಒಂದು ಆನೆ ಹಲವು ಯುದ್ಧಗಳಲ್ಲಿ ಭಾಗವಹಿಸಿರುತ್ತದೆ. ಒಮ್ಮೆ ಅದರ ಕಾಲು ಕೆಸರಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ. ಆ ಕೆಸರಿನಿಂದ ಅದಕ್ಕೆ ಹೊರಬರುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನು, ಆ ಆನೆ ಕಥೆ ಮುಗೀತು ಅಂತ ಸೈನಿಕರು ಹೋಗಿ ರಾಜನಿಗೆ ಹೇಳುತ್ತಾರೆ. ಆಗ ರಾಜ ಒಂದು ಉಪಾಯ ಮಾಡುತ್ತಾನೆ. ಅವನೇ ಆನೆ ಮುಂದೆ ಬಂದು ರಣಕಹಳೆ ಊದುತ್ತಾನೆ. ಅದನ್ನು ಕೇಳುತ್ತಿದ್ದಂತೆಯೇ, ಆನೆ ಎಲ್ಲ ಶ್ರಮ ಹಾಕಿ ಕೆಸರಿನಿಂದ ಆಚೆ ಬರುತ್ತದೆ. ಆ ಆನೆಯೇ ನಮ್ಮ ವಿಜಿ, ರಣಕಹಳೆ ಊದಿದವರು ಶ್ರೀಕಾಂತ್ ...’ ಪ್ರೇಮ್ ಇಂಥದ್ದೊಂದು ಕಥೆ ಹೇಳುತ್ತಿದ್ದಂತೆಯೇ ಸಭಾಂಗಣದಲ್ಲಿ ಜೋರು ಚಪ್ಪಾಳೆ. ‘ದುನಿಯಾ’ ವಿಜಯ್ ಕಣ್ಣಲ್ಲಂತೂ ನೀರು. ಇದಾಗಿದ್ದು ‘ಸಲಗ’ ಚಿತ್ರದ ಸಂತೋಷಕೂಟದಲ್ಲಿ.

ಚಿತ್ರ ಗೆದ್ದ ಖುಷಿಯಲ್ಲಿ ಇತ್ತೀಚೆಗೆ ಚಿತ್ರತಂಡದವರಿಗೆಲ್ಲ ಪಾರಿತೋಷಕಗಳನ್ನು ವಿತರಿಸಲಾಯಿತು. ಅದಕ್ಕೆಂದೇ ಶಿವರಾಜಕುಮಾರ್, ಗಣೇಶ್, ಪ್ರೇಮ್ ಶ್ರೀನಗರ ಕಿಟ್ಟಿ ಮುಂತಾದವರು ಬಂದಿದ್ದರು. ಆ ಸಂದರ್ಭದಲ್ಲೇ ಪ್ರೇಮ್ ಮಾತನಾಡಿದರು. ‘ವಿಜಿ ಕೆಸರಿನಲ್ಲಿ ಹೂತುಹೋಗಿದ್ದರು. ಇನ್ನು ಅವರ ಕೆರಿಯರ್ ಮುಗಿಯಿತು ಅಂತ ಎಲ್ಲರೂ ಅಂದುಕೊಂಡಿದ್ದರು. ಹೀಗಿರುವಾಗಲೇ ವಿಜಿ ಎದ್ದು ಬಂದಿದ್ದಾರೆ. ಇವತ್ತು ಅವರಿಗಾಗಿ ನಾವೆಲ್ಲರೂ ಬಂದಿದ್ದೇವೆ. ನಮ್ಮಲ್ಲಿ ಸ್ಪರ್ಧೆ ಇಲ್ಲ. ನಾವು ಸ್ಪರ್ಧೆಗಾಗಿ ಬಂದವರಲ್ಲ. ಸಿನಿಮಾ ಸಿಕ್ಕರೆ ಸಾಕು ಎಂಬ ಕಾಲ ಇತ್ತು. ಹಾಗಿರುವಾಗಿ ಚಿತ್ರರಂಗದಲ್ಲಿ ಇಷ್ಟು ವರ್ಷ ಮುಗಿಸಿದ್ದೇವೆ ಎನ್ನುವುದು ಖುಷಿಯ ವಿಷಯ’ ಎಂದರು.

ಪ್ರೇಮ್ ಹೇಳಿದ ಆನೆಯ ಕಥೆ ಕೇಳಿ ವಿಜಯ್ ಭಾವುಕರಾಗಿದ್ದರು. ಗದ್ಗದಿತರಾಗಿಯೇ ಮಾತನಾಡಿದರು. ಬಾಯಿಂದ ಮಾತು ಹೊರಡದೇ ಸುಮ್ಮನಾದರು. ‘ಈ ಗೆಲುವಿನಿಂದ ಇನ್ನಷ್ಟು ಕೆಲಸ ಮಾಡುವ ಹುರುಪು ಸಿಕ್ಕಿದೆ. ನಾನು ಈ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ನಿರ್ವಪಕರಿಗೆ ಫೋನ್ ಮಾಡಿದಾಗ, ಜೇಬಿನಲ್ಲಿ 40 ರೂ. ಇತ್ತು. ಅದರ ಫೋಟೋ ತೆಗೆದು ಈಗಲೂ ಇಟ್ಟುಕೊಂಡಿದ್ದೇನೆ. ಆ 40 ರೂ. ಇವತ್ತು ‘ಸಲಗ’ ಆಯ್ತು’ ಎಂದರು.