ಸಿನಿವಾಣಿ

ವಿಜಯವಾಣಿ ಚಿತ್ರ ವಿಮರ್ಶೆ: ಸಲಗ ನಡೆದಿದ್ದೇ ಹಾದಿಯಲ್ಲ

| ನಾಡಿಗೇರ್​

"ನಮ್​ ಹುಡುಗ್ರನ್ನ ಮುಟ್ಟಿದ್ಯಲ್ಲಾ? ಇಷ್ಟು ದಿನ 12 ಗಂಟೆ ಡ್ಯೂಟಿ ಮಾಡ್ತಿದ್ದೆ. ಇನ್ಮುಂದೆ 24 ಗಂಟೆ ಡ್ಯೂಟಿ ಮಾಡೋ ಹಾಗೆ ಮಾಡ್ಲಿಲ್ಲ ಅಂದ್ರೆ ನನ್​ ಹೆಸ್ರು ಸಲಗನೇ ಅಲ್ಲ ...' ಅಲ್ಲಿಂದ ಸಲಗ ಮತ್ತು ಇನ್​ಸ್ಪೆಕ್ಟರ್​ ಸಾಮ್ರಾಟ್​ ನಡುವೆ ಜಿದ್ದಾಜಿದ್ದಿ ಹೆಚ್ಚಾಗುತ್ತದೆ. ಸಲಗನ ಭೂಗತ ಚಟುವಟಿಕೆಗಳಿಗೆ ಮತ್ತು ರಕ್ತಪಾತಕ್ಕೆ ಬ್ರೇಕ್​ ಹಾಕಬೇಕು ಎನ್ನುವುದು ಸಾಮ್ರಾಟ್​ನ ಗುರಿಯಾದರೆ, ಸಾಮ್ರಾಟ್​ನ ಗಮನವನ್ನು ಪಕ್ಕಕ್ಕೆ ಸರಿಸಿ, ತನ್ನ ಹಿಟ್​ಲಿಸ್ಟ್​ನಲ್ಲಿ ಬಾಕಿ ಉಳಿದಿರುವ ಅವರಿಬ್ಬರನ್ನು ಸಾಯಿಸುವುದು ಸಲಗನ ಗುರಿ. ಈ ಜಿದ್ದಾಜಿದ್ದಿಯಲ್ಲಿ ಯಾರು ಗೆಲ್ಲುತ್ತಾರೆ? ಅದೇ ಸಸ್ಪೆನ್ಸ್​.

"ಸಲಗ' ಚಿತ್ರದ ಟ್ರೇಲರ್​ ನೋಡಿದರೆ, ಇದೊಂದು ಬೆಂಗಳೂರು ಭೂಗತಲೋಕದ ಕಥೆ ಎಂದನಿಸಬಹುದು. ಭೂಗತಲೋಕ ಎನ್ನುವುದಕ್ಕಿಂತ ಅದರ ಹಿನ್ನೆಲೆಯಲ್ಲಿ ನಡೆಯುವ ಒಂದು ಸೇಡಿನ ಕಥೆ ಎನ್ನುವುದು ಹೆಚ್ಚು ಸೂಕ್ತ. ಇಲ್ಲಿ ಬರೀ ರೌಡಿಗಳ ಕಾಳಗ ಎನ್ನುವುದಕ್ಕಿಂತ, ಕೆಲಸ ಹುಡುಕಿಕೊಂಡು ಬರುವ ಹಳ್ಳಿಜನರನ್ನು ಲೋಕಲ್​ ಲೀಡರ್​ಗಳು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ, ಅವರ ವಕ್ರದೃಷ್ಟಿಯಿಂದ ಹೇಗೆ ಒಂದು ಅಸಹಾಯಕ ಕುಟುಂಬ ಬೀದಿಗೆ ಬರುತ್ತದೆ, ವಿದ್ಯಾರ್ಥಿಯೊಬ್ಬ ಏಕೆ ರೌಡಿಯಾಗುತ್ತಾನೆ ... ಎಂಬ ಹಲವು ವಿಷಯಗಳನ್ನು ತೋರಿಸಲಾಗಿದೆ. ಮೊದಲಾರ್ಧ ಕೊಲೆ ಮತ್ತು ರಕ್ತಪಾತದ ಸುತ್ತ ಸುತ್ತಿದರೆ, ದ್ವೀತಿಯಾರ್ಧದಲ್ಲಿ ಅದಕ್ಕೆ ಕಾರಣವನ್ನು ನೀಡಲಾಗಿದೆ.

ಚಿತ್ರದಲ್ಲಿ ಒಂದು ಗಟ್ಟಿಯಾದ ಕಥೆ ಅಂತ ಇಲ್ಲ. ಆದರೂ ನೋಡಿಸಿಕೊಂಡು ಹೋಗುವ ವೇಗದ ನಿರೂಪಣೆ ಇದೆ. ಬೆಂಗಳೂರಿನಲ್ಲಿ ಸಾಗುವ ಹಲವು ಚಿತ್ರಗಳು ಬಂದಿವೆಯಾದರೂ, ಇಲ್ಲಿಯ ವಾತಾವರಣವೇ ಬೇರೆ. ಬೇರೆ ಚಿತ್ರಗಳಲ್ಲಿ ಕಾಣಸಿಗದ ಒಂದಿಷ್ಟು ಲೊಕೇಶನ್​ಗಳು, ವಿಪ್ತ ಪಾತ್ರಗಳು, ಮಾತುಗಳು, ಟ್ವಿಸ್ಟುಗಳು ... ಇವೆಲ್ಲವೂ ಚಿತ್ರವನ್ನು ಬೇಗಬೇಗ ಮುನ್ನಡೆಸುತ್ತವೆ. ಇದರಿಂದ ಮಾಸ್​ ಪ್ರೇಕ್ಷಕರು ಬಹಳ ಖುಷಿಯಾಗುವುದರಲ್ಲಿ ಎರಡು ಮಾತಿಲ್ಲ. ಅದರ ನಡುವೆಯೇ ಚಿತ್ರ ಒಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ? ಚಿತ್ರದುದ್ದಕ್ಕೂ ಹಿಂಸೆಯ ವೈಭವೀಕರಣ ಜಾಸ್ತಿಯೇ ಇದೆ. ಯುವಕರನ್ನು ಬಳಸಿಕೊಂಡು ಕೆಮ್​ ಮಾಡಿಸುವ ಮತ್ತು ಯುವಕರನ್ನು ಪ್ರಚೋದಿಸುವ ಸಾಕಷ್ಟು ದೃಶ್ಯಗಳಿವೆ. ಇನ್ನು, ಚಿತ್ರದಲ್ಲಿ ಅವಾಚ್ಯ ಶಬ್ಧಗಳು, ಬೈಗುಳಗಳು ಹೇರಳವಾಗಿವೆ. ಇವೆಲ್ಲವೂ ಸೆನ್ಸಾರ್​ ಮಂಡಳಿಯಿಂದ ಹೇಗೆ ತಪ್ಪಿಸಿಕೊಂಡು ಬಂದಿತು ಮತ್ತು "ಎ' ಸರ್ಟಿಫಿಕೇಟ್​ನಡಿ ಏನು ಬೇಕಾದರೂ ತೋರಿಸಬಹುದಾ? ಎಂಬ ಪ್ರಶ್ನೆಯನ್ನು ಚಿತ್ರ ನೋಡಿ ಹೊರಬಂದವರು ಕೇಳುತ್ತಾರೆ. ಇದು ವಿಜಯ್​ ನಿರ್ದೇಶನದ ಮೊದಲ ಚಿತ್ರ ಎಂದನಿಸುವುದಿಲ್ಲ. ಆ ಮಟ್ಟಿಗೆ ಅವರು ಚಿತ್ರವನ್ನು ತಾಂತ್ರಿಕವಾಗಿ ಕಟ್ಟಿಕೊಟ್ಟಿದ್ದಾರೆ. ಅದರ ಜತೆಗೆ ಅವರು ಇನ್ನಷ್ಟು ಜವಾಬ್ದಾರಿಯುತವಾಗಿ ಹೆಜ್ಜೆ ಇಡುವ ಅವಶ್ಯಕತೆಯೂ ಇತ್ತು. ರೌಡಿಗಳ ರೌಂಡಪ್​ ಹೆಸರಿನಲ್ಲಿ ಪೊಲೀಸರು ಮಾಡುವ ಕಿರುಕುಳಗಳು ಏನೆಲ್ಲ ಸಮಸ್ಯೆ ತಂದೊಡ್ಡುತ್ತವೆ ಎಂಬಂತಹ ವಿಷಯಗಳನ್ನು ಅವರು ಸೂಕ್ಷ$್ಮವಾಗಿ ಮತ್ತು ಮನಮುಟ್ಟುವಂತೆ ಹಿಡಿದಿಟ್ಟಿದ್ದಾರಾದರೂ, ಒಟ್ಟಾರೆ ಕೆಮ್​ನ ವೈಭವೀಕರಣ, ಅವಾಚ್ಯ ಮಾತುಗಳು ಇವೆಲ್ಲವುಗಳಿಂದ ಅವರ ಒಳ್ಳೆಯ ಉದ್ದೇಶ ಸಹ ಮಂಕಾಗಿಬಿಡುತ್ತದೆ. ನಟನೆಯ ವಿಷಯಕ್ಕೆ ಬಂದರೆ ವಿಜಯ್​ ಇಲ್ಲಿ ಬಹಳ ಗಂಭೀರ. ಮಾತು ಗಳು ಸಹ ಕಡಿಮೆಯೇ. ಸಂಜನಾಗೆ ಹೆಚ್ಚು ಅವಕಾಶವಿಲ್ಲ. ಧನಂಜಯ್​ ಬರುವುದು ದ್ವೀತಿಯಾ ರ್ಧಕ್ಕಾದರೂ, ಇರುವುದು ಸ್ವಲ್ಪ ಸಮಯವಾದರೂ ಗಮನಸೆಳೆಯುತ್ತಾರೆ. ಚರಣ್​ರಾಜ್​ ಹಾಡುಗಳು ಈಗಾಗಲೇ ಹಿಟ್​ ಆಗಿವೆ. ಶಿವಸೇನಾ ಛಾಯಾಗ್ರಹಣ ಪರಿಸರಕ್ಕೆ ಪೂರಕವಾಗಿದೆ.

ಚಿತ್ರ: ಸಲಗ ನಿರ್ದೇಶನ: "ದುನಿಯಾ' ವಿಜಯ್​ ನಿರ್ಮಾಣ: ಕೆ.ಪಿ. ಶ್ರೀಕಾಂತ್​ ತಾರಾಗಣ: "ದುನಿಯಾ' ವಿಜಯ್​, ಸಂಜನಾ ಆನಂದ್​, ಧನಂಜಯ್​, ಕಾಕ್ರೋಚ್​ ಸುಧಿ, ಯಶ್​ ಶೆಟ್ಟಿ ಮುಂತಾದವರು.