ಸಿನಿವಾಣಿ

ಡಿ. 22ರಂದೇ ಸಲಾರ್ ಚಿತ್ರ ಬಿಡುಗಡೆ ಏಕೆ? ನಿರ್ಮಾಪಕರು ಕೊಟ್ಟ ಅಚ್ಚರಿಯ ಕಾರಣ ಹೀಗಿದೆ…

ಹೈದರಾಬಾದ್​: ನಟ ಯಶ್​ ಅಭಿನಯದ ಕೆಜಿಎಫ್​ ಸಿನಿಮಾ ಯಶಸ್ಸಿನ ಬಳಿಕ ಭಾರತೀಯ ಚಿತ್ರರಂಗದ ಸ್ಟಾರ್​ ನಿರ್ದೇಶಕ ಎನಿಸಿಕೊಂಡಿರುವ ಪ್ರಶಾಂತ್​ ನೀಲ್​ ತಮ್ಮ ನಿರ್ದೇಶನದ ಬತ್ತಳಿಕೆಯಿಂದ "ಸಲಾರ್​" ಹೆಸರಿನ ಅದ್ಧೂರಿ ಸಿನಿಮಾಗೆ ಆ್ಯಕ್ಸನ್​ ಕಟ್​ ಹೇಳಿದ್ದಾರೆ.

ಪ್ರಭಾಸ್​ ನಟನೆಯ ಸಲಾರ್​ ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆಯಾಗಲಿದೆ. ಅದರಲ್ಲಿ ಮೊದಲ ಭಾಗ ಇದೇ ಡಿಸೆಂಬರ್​ 22ರಂದು ಜಗತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ. ಈ ಸಿನಿಮಾಗಾಗಿ ಸಿನಿಪ್ರಿಯರು ಕಾತರದಿಂದ ಎದುರು ನೋಡುತ್ತಿದ್ದಾರೆ. ಈ ಸಿನಿಮಾವನ್ನು ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದಾಗಿನಿಂದ ಇದು ಉಗ್ರಂ ಸಿನಿಮಾ ರಿಮೇಕ್​ ಇರಬಹುದು ಎಂಬ ಚರ್ಚೆಯು ಹುಟ್ಟುಕೊಂಡಿತು. ಆದರೆ, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಪ್ರಶಾಂತ್​ ನೀಲ್​ ಇದನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ, ಉಗ್ರಂ ಮತ್ತು ಸಲಾರ್​ ನಡುವೆ ಯಾವುದೇ ಕನೆಕ್ಷನ್​ ಇಲ್ಲ ಎಂದಿದ್ದಾರೆ. ಸಲಾರ್​ ಸಿನಿಮಾ ಉಗ್ರಂ ಮತ್ತು ಕೆಜಿಎಫ್​ ಎರಡೂ ಚಿತ್ರಗಳಿಗಿಂತ ಭಿನ್ನವಾಗಿದೆ ಎಂದಿದ್ದಾರೆ.

ಇನ್ನು ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದು ಚಿತ್ರದ ಪ್ರಚಾರದ ಭರಾಟೆಯು ಆರಂಭವಾಗಿದೆ. ಡಿ. 15 ರಿಂದ ಭಾರತದಲ್ಲಿ ಮುಂಗಡ ಬುಕಿಂಗ್ ಸಹ ಪ್ರಾರಂಭವಾಗಲಿದೆ. ಇದೆಲ್ಲದರ ನಡುವೆ ಡಿ.22ರಂದೇ ಸಲಾರ್​ ಚಿತ್ರವನ್ನು ಬಿಡುಗಡೆ ಮಾಡುವುದರ ಹಿಂದೆ ಜ್ಯೋತಿಷ್ಯದ ಕಾರಣಗಳೂ ಇವೆ ಎಂದು ನಿರ್ಮಾಪಕ ವಿಜಯ್​ ಕಿರಂಗದೂರು​ ಬಹಿರಂಗಪಡಿಸಿದ್ದಾರೆ.

ಆರಂಭದಲ್ಲಿ 2022ರ ಏಪ್ರಿಲ್​​ 14ಕ್ಕೆ ಬಿಡುಗಡೆ ದಿನಾಂಕ ನಿಗದಿ ಮಾಡಿದ್ದೆವು. ಆದರೆ, ಸಾಕಷ್ಟು ಕೆಲಸಗಳು ಬಾಕಿ ಇದ್ದಿದ್ದರಿಂದ 2023ರ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದೆವು. ಆದಾಗ್ಯೂ ಕಾರಣಾಂತರಗಳಿಂದ ಬಿಡುಗಡೆ ಸಾಧ್ಯವಾಗಲಿಲ್ಲ. ನಂತರ ನಾವು 2024ರ ಮೇ ವರೆಗೆ ವಿವಿಧ ದಿನಾಂಕಗಳನ್ನು ನೋಡಿದೆವು. ಆದರೆ, ಡಿಸೆಂಬರ್ 22 ಅತ್ಯುತ್ತಮ ದಿನಾಂಕ ಎಂದು ನಾವು ಭಾವಿಸಿದ್ದೇವೆ. ಇದರ ಹಿಂದೆ ಜ್ಯೋತಿಷ್ಯದ ಕಾರಣಗಳೂ ಇವೆ. ಅಲ್ಲದೆ, ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸೀಸನ್‌ ಆಗಿರುವುದರಿಂದ ಹೆಚ್ಚಿನ ಜನರು ಚಿತ್ರಮಂದಿರಗಳಿಗೆ ಸೇರುವ ಸಮಯವಾಗಿದೆ ಎಂದು ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ವಿಜಯ್​ ಕಿರಂಗದೂರು ಹೇಳಿದ್ದಾರೆ.

ಡಿ.21ರಂದು ಶಾರುಖ್​ ಖಾನ್​ ನಟನೆಯ ಡಂಕಿ ಮತ್ತು ಹಾಲಿವುಡ್​ನ ಆಕ್ವಾಮನ್ ಚಿತ್ರಗಳು ಬಿಡುಗಡೆಯಾಗಲಿದ್ದು, ಒಂದು ದಿನದ ನಂತರ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಾವು ಈಗಾಗಲೇ ಪ್ರದರ್ಶಕರು ಮತ್ತು ವಿತರಕರೊಂದಿಗೆ ಸಭೆಗಳನ್ನು ನಡೆಸುತ್ತಿದ್ದೇವೆ. ಡಿ.22ರಂದು ಒಂದೇ ಚಿತ್ರ ಬಿಡುಗಡೆ ಆಗುತ್ತಿರುವುದರಿಂದ ಸಾಮಾನ್ಯವಾಗಿ 60-70 ರಷ್ಟು ಮಂದಿ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ ಎಂದರು.

ಪ್ರಭಾಸ್​ ಹೊರತುಪಡಿಸಿ, ನಾಯಕಿಯಾಗಿ ಶ್ರುತಿ ಹಾಸನ್​, ನಟ ಜಗಪತಿ ಬಾಬು, ಈಶ್ವರಿ ರಾವ್​, ಶ್ರಿಯಾ ರೆಡ್ಡಿ, ಪೃಥ್ವಿರಾಜ್​ ಸುಕುಮಾರ್​ ಮತ್ತು ತಿನ್ನು ಆನಂದ್​ ಸೇರಿದಂತೆ ಬಹುತಾರಾಗಣವೇ ಈ ಚಿತ್ರದಲ್ಲಿದೆ. ದೊಡ್ಡ ಬಜೆಟಿನ ಚಿತ್ರವಾಗಿದ್ದು, ಕೆಜಿಎಫ್​ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್​ ಈ ಸಿನಿಮಾವನ್ನು ನಿರ್ಮಿಸಿದೆ. ರವಿ ಬಸ್ರೂರ್​ ಅವರೇ ಸಲಾರ್​ಗೂ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್​)