ಸಿನಿವಾಣಿ

ಆತ್ಮಚರಿತ್ರೆ ಬರೆಯದಿರಲು ಸೈಫ್​ ಅಲಿ ಖಾನ್​ ನಿರ್ಧಾರ

ಮುಂಬೈ: ಒಂದು ತಿಂಗಳ ಹಿಂದೆ ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ತಮ್ಮ ಆತ್ಮಚರಿತ್ರೆ ಬರೆಯುವ ಬಗ್ಗೆ ಮಾತನಾಡಿದ್ದರು. ಆ ಆತ್ಮಚರಿತ್ರೆಯಲ್ಲಿ ತಮ್ಮ ಅನುಭವಗಳನ್ನು ಮತ್ತು ತಮ್ಮ ಚಿತ್ರಜೀವನದ ಹೋರಾಟಗಳ ಕುರಿತಾಗಿ ಬೆಳಕು ಚೆಲ್ಲುವುದಾಗಿ ಹೇಳಿದ್ದರು. ಯಾವಾಗ ಆತ್ಮಚರಿತ್ರೆ ಬರೆಯುವುದಾಗಿ ಸೈಫ್​ ಘೋಷಿಸಿದರೋ, ಅವರಿಗೆ ನೆಟ್ಟಿಗರು ಸರಿಯಾಗಿ ಬೈದು ಬೆವರಿಳಿಸಿದರು.

ಇದೀಗ ಸೈಫ್​, ಆತ್ಮಚರಿತ್ರೆ ಬರೆಯುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಂತಿದೆ. ನಾಳೆ ಜನ ತಮ್ಮನ್ನು ಅನಗತ್ಯವಾಗಿ ಜರಿಯುವ ಸಾಧ್ಯತೆ ಇರುವ ಕಾರಣ, ಈ ರಗಳೆಯಲ್ಲಾ ಬೇಡವೆಂದು ಅವರು ತೀರ್ಮಾನಿಸಿದಂತಿದೆ.

ಈ ಕುರಿತು ಮಾತನಾಡಿರುವ ಅವರು, 'ಯಾರೋ ನಿಮ್ಮ ಅನುಭವಗಳನ್ನೆಲ್ಲಾ ಪುಸ್ತಕ ರೂಪದಲ್ಲಿ ಹೊರತನ್ನಿ ಎಂದರು. ಅದಕ್ಕೆ ನಾನು ಒಪ್ಪಿದೆ. ಆದರೆ, ಈಗ ಅವೆಲ್ಲಾ ಬೇಕಾ ಎನಿಸುತ್ತಿದೆ. ಮೊದಲನೆಯದಾಗಿ ಅದೊಂದು ದೊಡ್ಡ ಕೆಲಸ ಮತ್ತು ಅದನ್ನು ಪ್ರಾಮಾಣಿಕವಾಗಿ ಮಾಡಬೇಕು. ಎರಡನೆಯದಾಗಿ, ಆ ಪುಸ್ತಕ ಬರೆದ ನಂತರ ಜನ ನನ್ನನ್ನು ಹೀಯಾಳಿಸುವಾಗ ಅದಕ್ಕೆ ನಾನು ತಯಾರಿದ್ದೀನಾ ಎಂಬುದು ನನಗೆ ಗೊತ್ತಿಲ್ಲ. ಹಾಗಾಗಿ ಪುಸ್ತಕ ಬರೆಯಬೇಕಾ ಎಂದನಿಸುತ್ತಿದೆ' ಎಂದು ಅವರು ಹೇಳಿದ್ದಾರೆ.

'ಈ ಮಾತು ಹೇಳುವುದಕ್ಕೆ ಬಹಳ ಬೇಸರವಾಗುತ್ತದೆ. ಆದರೂ ಇದು ನಿಜ. ನಮ್ಮ ದೇಶದಲ್ಲಿ ಒಂದು ವರ್ಗದ ಜನ ಬಹಳ ನೆಗೆಟಿವ್​ ಆಗಿ ಯೋಚಿಸುತ್ತಾರೆ ಮತ್ತು ಕಾರಣವಿಲ್ಲದೆ ಇನ್ನೊಬ್ಬರ ವಿರುದ್ಧ ಮುಗಿಬೀಳುತ್ತಾರೆ. ನಾನು ನನ್ನ ಅನುಭವ, ಹೋರಾಟ ಅಂತೆಲ್ಲ ಬರೆದುಕೊಂಡು, ನಾಳೆ ಇನ್ನ್ಯಾರದ್ದೋ ಬಾಯಿಗೆ ಆಹಾರವಾಗುವುದಕ್ಕೆ ಇಷ್ಟವಿಲ್ಲ' ಎಂಬುದು ಅವರ ನಿಲುವು.

ಆತ್ಮಚರಿತ್ರೆಯನ್ನು ಕೈಬಿಡುತ್ತಿರುವ ಕುರಿತು ಇನ್ನೂ ಪುಸ್ತಕ ಪ್ರಕಾಶಕರಿಗೆ ಹೇಳಿಲ್ಲವಂತೆ. 'ಹೇಳಬಹುದು ಅಥವಾ ಹೇಳದಿರಬಹುದು. ಪುಸ್ತಕ ಬರೆಯುವ ಆಸಕ್ತಿಯಂತೂ ಸದ್ಯಕ್ಕೆ ಇಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.