ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಹಾಟ್ ನಟಿ ಕರೀನಾ ಕಪೂರ್ ಖಾನ್ ಅವರ ಮಗ ಜೆಹ್ನ ಮೊದಲ ಹುಟ್ಟುಹಬ್ಬದ ಸೂಪರ್ ಸ್ಪೆಷಲ್ ಸಂದರ್ಭವಾಗಿ ಎಲ್ಲಾ ಕುಟುಂಬ ಸದಸ್ಯರು ಒಟ್ಟಾಗಿ ಆಚರಿಸಲು ಸೇರಿದರು. ಇದೇ ಕಾರಣಕ್ಕೆ, ನಟ ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿಯ ಮಕ್ಕಳು ಮತ್ತು ಕರೀನಾ ಅವರ ಎರಡು ಪುತ್ರರು ಒಂದೇ ಸ್ಥಳದಲ್ಲಿ ಕಾಣಿಸಿದ್ದಾರೆ. ಈ ಖುಷಿಯ ಸಂದರ್ಭದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹೌದು, ಜೆಹ್ನ ಹುಟ್ಟುಹಬ್ಬದ ಆಚರಣೆಯ ಮತ್ತು ತಂದೆಯ ಜತೆಗೆ ನಾಲ್ಕು ಮಕ್ಕಳು ಒಟ್ಟಿಗೆ ಕಾಣಿಸಿರುವ ಫೋಟೋಗಳನ್ನು ನಟಿ ಸಾರಾ ಅಲಿ ಖಾನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇವರ ಕುಟುಂಬದ ಫೋಟೋಗಳಲ್ಲಿ ಸೈಫ್ ತನ್ನ ಮಕ್ಕಳಾದ ಜೆಹ್, ತೈಮೂರ್, ಸಾರಾ ಮತ್ತು ಇಬ್ರಾಹಿಂ ಅವರೊಂದಿಗೆ ಒಟ್ಟಿಗೆ ಕಾಣಿಸಿರುವ ಫೋಟೋ ಮಾತ್ರ ಸಖತ್ ವೈರಲ್ ಆಗಿದೆ. ಸೈಫ್ ತಮ್ಮ ನಾಲ್ಕು ಮಕ್ಕಳ ಜೊತೆಗೆ ಎಂಜಾಯ್ ಮಾಡುತ್ತಿರುವ ಕ್ಯಾಂಡಿಡ್ ಫೋಟೋಗಳು ಕೂಡಾ ಕಾಣಿಸಿಕೊಂಡಿದ್ದು, ಅವುಗಳು ಕೂಡಾ ನೆಟ್ಟಿಗರ ನಡುವೆ ಧೂಳೆಬ್ಬಿಸುತ್ತಿವೆ. ಸಾರಾ ಹಂಚಿಕೊಂಡ ಫೋಟೋಗಳ ಪೋಸ್ಟ್ಗೆ ಬರೋಬ್ಬರಿ 2 ಮಿಲಿಯನ್ ಲೈಕ್ಸ್ ಬಂದಿವೆ. ಇನ್ನೂ, ಮೊದಲನೇ ಹೆಂಡತಿಯ ಮಕ್ಕಳು ಮತ್ತು ಎರಡನೇ ಪತ್ನಿಯ ಮಕ್ಕಳು ಇಷ್ಟು ಖುಷಿಯಾಗಿ ಒಟ್ಟಿಗೆ ಇರುವುದು ಕಂಡು ಅಭಿಮಾನಿಗಳು, ನೆಟ್ಟಿಗರು ಬೇಷ್ ಎಂದಿದ್ದಾರೆ.