ಸಿನಿವಾಣಿ

ತಮ್ಮ ಮೊದಲ ಬಾಲಿವುಡ್​ ಚಿತ್ರದಲ್ಲಿ ಸೀತೆಯಾಗ್ತಾರಾ ಸಾಯಿ ಪಲ್ಲವಿ?

ಮುಂಬೈ: ದಕ್ಷಿಣದ ಮೂರು ಭಾಷೆಗಳಲ್ಲಿ ನಟಿಸಿರುವುದಷ್ಟೇ ಅಲ್ಲ, ಮೂರೂ ಭಾಷೆಗಳಲ್ಲಿ ಬಹಳ ಜನಪ್ರಿಯ ನಟಿ ಎಂದನಿಸಿಕೊಂಡಿದ್ದಾರೆ ಸಾಯಿ ಪಲ್ಲವಿ. ಈಗ ಅವರು ಬಾಲಿವುಡ್​ಗೆ ಹೊರಟು ನಿಂತಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿದೆ. ಅಷ್ಟೇ ಅಲ್ಲ, ತಮ್ಮ ಮೊದಲ ಬಾಲಿವುಡ್​ ಚಿತ್ರದಲ್ಲೇ ಅವರು ಸೀತೆ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ.

ತೆಲುಗು ನಿರ್ಮಾಪಕ ಅಲ್ಲು ಅರವಿಂದ್​, ಮೂರು ವರ್ಷಗಳ ಹಿಂದೆ ರಾಮಾಯಣ ಕುರಿತು ಹಿಂದಿಯಲ್ಲಿ ಚಿತ್ರ ಮಾಡುವುದಾಗಿ ಘೋಷಿಸಿದ್ದರು. ಈ ಚಿತ್ರದಲ್ಲಿ ರಾಮನಾಗಿ ಹೃತಿಕ್​ ರೋಶನ್​ ನಟಿಸಿದರೆ, ಸೀತೆಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಇತ್ತು. ಆದರೆ, ಚಿತ್ರ ಮುಂದುವರೆಯಲೇ ಇಲ್ಲ.

ಈಗ ಅದೇ ಚಿತ್ರ ಬೇರೆ ಪಾತ್ರಧಾರಿಗಳ ಜತೆಗೆ ಮುಂದಿನ ವರ್ಷ ಹೊಸದಾಗಿ ಸೆಟ್ಟೇರುವ ಸಾಧ್ಯತೆ ಇದೆಯಂತೆ. ಈ ಬಾರಿ ರಾಮನ ಪಾತ್ರದಲ್ಲಿ ರಣಬೀರ್​ ಕಪೂರ್​ ಮತ್ತು ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವರಿ ನಟಿಸಬಹುದು ಎಂದು ಸುದ್ದಿಯಾಗಿದೆ. ಆದರೆ, ಅಲ್ಲು ಅರವಿಂದ್​ ಆಗಲೀ, ಸಾಯಿ ಪಲ್ಲವಿಯಾಗಲೀ ಈ ಬಗ್ಗೆ ಎಲ್ಲೂ, ಏನೂ ಮಾತನಾಡಿಲ್ಲ.

ಹಾಗಾದರೆ, ಈ ಸುದ್ದಿ ನಿಜವಾ? ತಮ್ಮ ಮೊದಲ ಬಾಲಿವುಡ್​ ಚಿತ್ರದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿದಿದೆ. ಈ ಪ್ರಶ್ನೆಗೆ ಮುಂದಿನ ವರ್ಷ ಉತ್ತರ ಸಿಗವ ಸಾಧ್ಯತೆ ಇದೆ.