ಸಿನಿವಾಣಿ

ತಂದೇಲ್​ ಪ್ರಚಾರದಿಂದ ದೂರ ಉಳಿದ ನಟಿ ಸಾಯಿ ಪಲ್ಲವಿ ; ಕಾರಣವೇನು ಗೊತ್ತಾ?

ಕಳೆದ ವರ್ಷ ರಿಲೀಸ್​ ಆದ ತಮಿಳಿನ "ಅಮರನ್​' ಚಿತ್ರದ ಯಶಸ್ಸಿನ ಬೆನ್ನಲ್ಲೇ, ಮಲಯಾಳಂ ನಟಿ ಸಾಯಿ ಪಲ್ಲವಿ ನಟಿಸಿರುವ ತೆಲುಗು ಸಿನಿಮಾ "ತಂಡೇಲ್​' ಇದೇ 7ರಂದು ತೆರೆಗೆ ಬರಲು ರೆಡಿಯಾಗಿದೆ. ಇದೊಂದು ರೊಮ್ಯಾಂಟಿಕ್​ ಡ್ರಾಮಾ ಚಿತ್ರವಾಗಿದ್ದು ಪಲ್ಲವಿ ನಾಗಚೈತನ್ಯಗೆ ನಾಯಕಿಯಾಗಿದ್ದಾರೆ. "ಕಾರ್ತಿಕೇಯ', "ಪ್ರೇಮಂ' ನಿರ್ದೇಶಕ ಚಂದೂ ಮೊಂಡೇಟಿ ಆ್ಯಕ್ಷನ್​-ಕಟ್​ ಹೇಳಿರುವ ಈ ಚಿತ್ರ ತೆಲುಗು ಜತೆಗೆ ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಮೂಡಿಬರಲಿದೆ.

ಈಗಾಗಲೇ ಚಿತ್ರದ ತೆಲುಗು ಮತ್ತು ತಮಿಳು ಟ್ರೇಲರ್​ ರಿಲೀಸ್​ ಆಗಿದ್ದು, ಶುಕ್ರವಾರ ಮುಂಬೈನಲ್ಲಿ ಬಾಲಿವುಡ್​ ನಟ ಆಮಿರ್​ ಖಾನ್​ ಹಿಂದಿ ಟ್ರೇಲರ್​ ಬಿಡುಗಡೆ ಮಾಡಿದರು. ಆದರೆ, ಕಾರ್ಯಕ್ರಮಕ್ಕೆ ನಾಯಕಿ ಸಾಯಿಪಲ್ಲವಿ ಗೈರಾಗಿದ್ದರು. ಈ ಬಗ್ಗೆ ನಿರ್ದೇಶಕ ಚಂದೂ, "ಸಾಯಿ ಪಲ್ಲವಿ ಕಳೆದ ಕೆಲ ದಿನಗಳಿಂದ ಚಿತ್ರದ ಪ್ರಚಾರಕ್ಕಾಗಿ ಬೇರೆ ಬೇರೆ ನಗರಗಳಿಗೆ ಓಡಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರು ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ಹೀಗಾಗಿ ಹಿಂದಿ ಟ್ರೇಲರ್​ ಲಾಂಚ್​ಗೆ ಅವರು ಬಂದಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ, ಸಾಯಿ ಪಲ್ಲವಿ ಆಮಿರ್​ ಖಾನ್​ ಪುತ್ರ ಜುನೈದ್​ಗೆ ನಾಯಕಿಯಾಗಿ "ಏಕ್​ ದಿನ್​' ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದು, ನಿತೇಶ್​ ತಿವಾರಿ ನಿರ್ದೇಶಿಸುತ್ತಿರುವ "ರಾಮಾಯಣ' ಚಿತ್ರದಲ್ಲೂ ಸೀತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. &ಏಜೆನ್ಸೀಸ್​