ಬೆಂಗಳೂರು: ಕನ್ನಡ ಸಿನಿಮಾ ಕ್ಷೇತ್ರದ ಸಾಹಸಸಿಂಹ ದಿ. ಡಾ. ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದು, ಇದರಿಂದ ವಿಷ್ಣುದಾದರ ಅಭಿಮಾನಿಗಳು ಕೆರಳಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ವಿಷ್ಣುದಾದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯ್ ರಂಗರಾಜುಗೆ ಸೋಶಿಯಲ್ ಮೀಡಿಯಾದಲ್ಲೂ ಕರ್ನಾಟಕದ ಜನತೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ವಿಷ್ಣು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ವಿಷ್ಣು ಅಭಿಮಾನಿಗಳಷ್ಟೇ ಅಲ್ಲ ಸ್ಯಾಂಡಲ್ವುಡ್ನ ನಟರೂ ವಿಜಯ್ ರಂಗರಾಜು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಟ ಜಗ್ಗೇಶ್, 'ನತದೃಷ್ಟ ಶಿಕಾಮಣಿ! ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆ ಮಾತಾಡುವ ಗುಣದವ ಎಲ್ಲಿಯೂ ಸಲ್ಲದವ! ಅದರಲ್ಲೂ ಇವ ಕಲಾವಿದನಂತೆ ಈ ದರಿದ್ರ ಮುಖವನ್ನು ಯಾವ ಚಿತ್ರದಲ್ಲೂ ನೋಡಿದ ನೆನಪಿಲ್ಲ. ಕನ್ನಡದ ಹೃದಯಗಳೇ ಇವನ ಅನಿಷ್ಟ ಸೊಲ್ಲು ಅಡುಗುವಂತೆ ಕನ್ನಡಿಗರ ದೂಷಣೆಗೆ ಹಿಂಜರಿಯುವಂತೆ ಉತ್ತರಿಸಿ. ಇವನ ಉದ್ದಟತನ ಮಾತಿಗೆ ಕ್ಷಮೆ ಇಲ್ಲ. ಸತ್ತವರು ದೇವರಸಮ, ದುಃಖವಾಯಿತು!' ಎಂದು ಖಳನಟ ವಿಜಯ್ ರಂಗರಾಜುಗೆ ಮಾತಿನಲ್ಲೇ ತಿವಿದಿದ್ದಾರೆ.
ಒಳ್ಳೇ ಹುಡುಗ ಪ್ರಥಮ್ ಕೂಡ ತೆಲುಗು ಸಿನಿಮಾ ಖಳನಟನ ಹೇಳಿಕೆಯನ್ನು ಖಂಡಿಸಿದ್ದು, 'ಅಮರವಾಗಿರೋ ಮರೆಯದ ಮಾಣಿಕ್ಯ ವಿಷ್ಣು ಸರ್ ಬಗ್ಗೆ ಕೆಟ್ಟದಾಗಿ ಮಾತಾಡೋದು ಬದುಕಿರೋ ನಿಮ್ಮಪ್ಪ-ಅಮ್ಮ, ಹೆಂಡತಿ ಬಗ್ಗೆ ಅಸಹ್ಯವಾಗಿ ಮಾತನಾಡಿದಂತೆ. ದಾದರಿಗೆ ಹೆಣ್ಣಿನ ವೀಕ್ನೆಸ್ ಇದ್ದಿದ್ರೆ ಮೂರ್ನಾಲ್ಕು ಮದುವೆ ಆಗಿತಿದ್ರು. ಮೇರುನಟರ ಬಗ್ಗೆ ಅಸಭ್ಯವಾಗಿ ಮಾತಾಡೋ ಮೂಲಕ ನಿಮ್ಮೊಬ್ಬರಿಗೆ ಅಲ್ಲ, ತಮಿಳುನಾಡಿಗೆ ಸೂತಕ ಮಾಡಿದ್ರಿ, ನಾಚಿಕೆ ಆಗ್ಬೇಕು ನಿಮ್ ಜನ್ಮಕ್ಕೆ' ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ವಿಷ್ಣುವರ್ಧನ್ ಅವರ ಅಳಿಯ ಅನುರುಧ್ ಕೂಡ ತೆಲುಗು ಖಳನಟನ ಮಾತಿಗೆ ಬೇಸರ ವ್ಯಕ್ತಪಡಿಸಿದ್ದು. ಈ ರಾಜ್ಯಕ್ಕೆ ನೀವೆಂದೂ ಬರಬೇಡಿ, ಬಂದರೆ ಏನಾಗತ್ತೋ ಗೊತ್ತಿಲ್ಲ ಎಂದು ವಿಜಯ್ ರಂಗರಾಜುಗೆ ಎಚ್ಚರಿಸಿದ್ದಾರೆ.