ಸಿನಿವಾಣಿ

ಕಲರ್ಸ್ ಕನ್ನಡದಲ್ಲಿ ಎಸ್​.ಪಿ.ಬಾಲಸುಬ್ರಹ್ಮಣ್ಯಂ ನೆನಪು

ಬೆಂಗಳೂರು: ‘ಗಾನ ಗಾರುಡಿಗ’ ಎಸ್​ಪಿ ಬಾಲಸುಬ್ರಮಣ್ಯಂ ಅಗಲಿ ಐದು ತಿಂಗಳಾಗುತ್ತ ಬಂತು. ಇದೀಗ ಅವರನ್ನು ಸ್ಮರಿಸುವ ಕೆಲಸವನ್ನು ಕಲರ್ಸ್ ಕನ್ನಡ ವಾಹಿನಿ ಮಾಡಿದೆ. ‘ಎದೆ ತುಂಬಿ ಹಾಡುವೆನು’ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಎಸ್​ಪಿ ಬಾಲಸುಬ್ರಮಣ್ಯಂ ಅವರನ್ನು ನೆನಪು ಮಾಡಿಕೊಂಡಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಚಂದನವನದ ಸಂಗೀತ ನಿರ್ದೇಶಕರು, ಗಾಯಕರು, ಕಲಾವಿದರು ಭಾಗಿಯಾಗಿ ನೆಚ್ಚಿನ ಗಾಯಕನನ್ನು ಸ್ಮರಿಸಿಕೊಂಡಿದ್ದಾರೆ.

‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಕ್ಕೆ ಎಸ್​ಪಿಬಿ ಪುತ್ರ ಎಸ್.ಪಿ ಚರಣ್, ಎಸ್​ಪಿಬಿ ಸಹೋದರಿ ಶೈಲಜಾ ಮುಖ್ಯ ಅತಿಥಿಗಳಾಗಿ ಆಗಮಿಸಿ, ಅವರ ಹಾಡು, ವ್ಯಕ್ತಿತ್ವ ಎಲ್ಲವನ್ನೂ ನೆನೆದಿದ್ದಾರೆ. ‘ನಾದಬ್ರಹ್ಮ’ ಹಂಸಲೇಖ, ನಟ-ನಿರ್ದೇಶಕ ‘ಕ್ರೇಜಿಸ್ಟಾರ್’ ರವಿಚಂದ್ರನ್, ಎಸ್​ಪಿಬಿ ಜತೆಗಿನ ದಿನಗಳನ್ನು ಮೆಲುಕು ಹಾಕಿದರೆ, ಕರ್ನಾಟಕದಲ್ಲಿಯೇ ಹುಟ್ಟಿ ಬನ್ನಿ ಎಂಬ ಹಾಡೊಂದನ್ನು ಸಾಧು ಕೋಕಿಲ ಹಾಡಿದ್ದಾರೆ. ಇನ್ನುಳಿದಂತೆ ನಟರಾದ ರಾಜೇಶ್, ಶ್ರೀನಾಥ್, ದೊಡ್ಡಣ್ಣ, ಅನು ಪ್ರಭಾಕರ್, ಗಿರಿಜಾ ಲೋಕೇಶ್, ರಾಕ್​ಲೈನ್ ವೆಂಕಟೇಶ್, ವಿಜಯ್ ರಾಘವೇಂದ್ರ, ಶರಣ್ ಅವರ ಹಾಡುಗಳನ್ನು ಮತ್ತೆ ಮತ್ತೆ ಗುನುಗಿದ್ದಾರೆ. ಎಂ.ಡಿ. ಪಲ್ಲವಿ, ಗುರುಕಿರಣ್, ಸಾಧು ಕೋಕಿಲ, ವ್ಯಾಸರಾಜ್, ಚಿನ್ಮಯ್ ಅತ್ರೇಯ, ಚೇತನ್, ಅರ್ಚನಾ ಉಡುಪ ಹಾಡುಗಳ ಮೂಲಕ ಎಸ್​ಪಿಬಿ ಅವರನ್ನು ಸ್ಮರಿಸಿದ್ದಾರೆ. ಸೃಜನ್ ಲೋಕೇಶ್ ನಿರೂಪಣೆ ಮಾಡಿದ್ದು, ಇದೇ 20 ಮತ್ತು 21ರ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.