ಸಿನಿವಾಣಿ

ಜನ್ಮಭೂಮಿಗೆ ಜೈ ಎಂದ ಸುನೀಲ್​ ಶೆಟ್ಟಿ; ರೂಪೇಶ್​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ "ಜೈ' ತೆರೆಗೆ ಬರಲು ರೆಡಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಬಿಗ್​ಬಾಸ್​ ಕನ್ನಡ ಸೀಸನ್​ 9ರಲ್ಲಿ ಗೆದ್ದು ಬೀಗಿದ್ದ ರೂಪೇಶ್​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸಿನಿಮಾ "ಜೈ'. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ರೂಪೇಶ್​ಗೆ ಅದ್ವಿತಿ ಶೆಟ್ಟಿ ನಾಯಕಿಯಾಗಿದ್ದಾರೆ. ಜತೆಗೆ "ಪೈಲ್ವಾನ್​' ಬಳಿಕ ಬಾಲಿವುಡ್​ ನಟ ಸುನಿಲ್​ ಶೆಟ್ಟಿ ಮತ್ತೆ ಕನ್ನಡಕ್ಕೆ ವಾಪಸ್ಸಾಗಿರುವ ಕಾರಣ "ಜೈ' ಬಗ್ಗೆ ನಿರೀೆ ಗರಿಗೆದರಿದೆ. ಇದೇ ತಿಂಗಳ 14ರಂದು ಸಿನಿಮಾ ತೆರೆಗೆ ಬರಲಿದ್ದು, ಇತ್ತೀಚೆಗಷ್ಟೆ ಟ್ರೇಲರ್​ ಬಿಡುಗಡೆ ಮಾಡಲಾಯಿತು.

ನಾಯಕ, ನಿರ್ದೇಶಕ ರೂಪೇಶ್​ ಶೆಟ್ಟಿ, "ಇವತ್ತು ತುಂಬ ಖುಷಿಯ ದಿನ. ತುಳುವಿನಲ್ಲಿ ಸಣ್ಣದಾಗಿ ಮಾಡಬೇಕೆಂದು ಪ್ರಾರಂಭಿಸಿದ ಚಿತ್ರವಿದು. ಆದರೆ, ವಿದೇಶದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ತುಳು ಚಿತ್ರ ಇದೀಗ ಕನ್ನಡ ಮತ್ತು ತುಳು ಎರಡೂ ಭಾಷೆಗಳ ಸಿನಿಮಾ ಆಗಿ ಬದಲಾಗಿದೆ. ಅದಕ್ಕೆ ಕಾರಣ ಸುನೀಲ್​ ಶೆಟ್ಟಿ. ಅವರಿಗೆ ನಾವ್ಯಾರು ಅಂತನೇ ಗೊತ್ತಿರಲಿಲ್ಲ. ನಿರ್ಮಾಪಕರ ಮೂಲಕ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡೆವು. ಒಪ್ಪಿ ನಮ್ಮ ಚಿತ್ರದಲ್ಲಿ ನಟಿಸಿದರು. ಸಿನಿಮಾ ಪೂರ್ಣಗೊಂಡ ಬಳಿಕ ಅವರು ಹೋಗಿಬಿಡಬಹುದಿತ್ತು. ಆದರೆ, ಪ್ರಚಾರಕ್ಕೂ ನಮ್ಮ ಜತೆ ನಿಂತಿದ್ದಾರೆ. ರಿಲೀಸ್​ ಸಮಯದಲ್ಲೂ ಬರುವುದಾಗಿ ಹೇಳಿದ್ದಾರೆ' ಎಂದು ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ, ನಿರೂಪಕಿ ಅನುಶ್ರೀ, ಉಪೇಂದ್ರ ಶೆಟ್ಟಿ, ಮಧು ರಾವ್​, ರಾಜ್​ ದೀಪಕ್​ ಶೆಟ್ಟಿ, ಪ್ರಕಾಶ್​ ಕುಮ್ಕಳ ಹಾಜರಿದ್ದರು.

ಮುಂಬೈ ಕರ್ಮಭೂಮಿ, ಮುಲ್ಕಿ ಜನ್ಮಭೂಮಿ

ನಟ ಸುನೀಲ್​ ಶೆಟ್ಟಿ, "ನಾನು ಕರ್ನಾಟಕದವನು. ನನ್ನ ಸಹೋದರಿ ಸೇರಿ ಹಲವು ಸಂಬಂಧಿಕರು ಇರುವ ಕಾರಣ ಬೆಂಗಳೂರಿಗೆ ಆಗಾಗ ಬರುತ್ತಿರುತ್ತೇನೆ. ಇಲ್ಲಿನ ಹಲವು ನೆನಪುಗಳಿವೆ. ಡಾ. ರಾಜಕುಮಾರ್​, ಪುನೀತ್​ ನನಗೆ ತುಂಬ ಕ್ಲೋಸ್​ ಇದದ್ರು. ಕಿಚ್ಚ ಸುದೀಪ್​ ಕೂಡ ನನಗೆ ಆತ್ಮೀಯ. ಮುಂಬೈನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಅದು ನನ್ನ ಕರ್ಮಭೂಮಿ. ಆದರೆ, ನನ್ನ ಜನ್ಮಭೂಮಿ ಕರ್ನಾಟಕದ ಮುಲ್ಕಿ' ಎಂದರು.