ಸಿನಿವಾಣಿ

ರೂಪೇಶ್​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಜೈ'ಗೆ ಜೈ ಎಂದ ವಿದೇಶಿ ಪ್ರೇಕ್ಷಕರು

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಬಿಗ್​ಬಾಸ್​ ಕನ್ನಡ ಸೀಸನ್​ 9'ರ ವಿನ್ನರ್​ ರೂಪೇಶ್​ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ "ಜೈ'. ತುಳು ಮತ್ತು ಕನ್ನಡ ದ್ವಿಭಾಷೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ "ಲವ್​ ಯು' ಎಂದು ಸಾಗುವ ಹಾಡನ್ನು ಇತ್ತಿಚೆಗಷ್ಟೆ ಬಿಡುಗಡೆ ಮಾಡಲಾಯಿತು. ಇದೊಂದು ರೊಮ್ಯಾಂಟಿಕ್​ ಸಾಂಗ್​ ಆಗಿದ್ದು ನಿಜ ಜೋಡಿಗಳಾದ ಗುರುಕಿರಣ್​ & ಪಲ್ಲವಿ, ನಿರಂಜನ್​ ದೇಶಪಾಂಡೆ & ಯಶಸ್ವಿನಿ, ವಿನಯ್​ ಗೌಡ & ಅಕ್ಷತಾ, ರೂಪೇಶ್​ ರಾಜಣ್ಣ & ಶ್ರೀಲಕ್ಷ್ಮೀ, ಆರ್ಯವರ್ಧನ್​ ಗುರೂಜಿ & ಸುಚೇತನಾ ದಂಪತಿ ಬಿಡುಗಡೆ ಮಾಡಿದರು.

ಚಿತ್ರದ ಬಗ್ಗೆ ನಾಯಕ, ನಿರ್ದೇಶಕ ರೂಪೇಶ್​ ಶೆಟ್ಟಿ, "ಈ ಹಾಡಿನ ಐದು ವರ್ಷನ್​ ಕೇಳಿದ ಬಳಿಕ ಆರನೇ ವರ್ಷನ್​ ಅಂತಿಮ ಮಾಡಿದೆವು. ಮತ್ತೆ ಮತ್ತೆ ಕೇಳಬೇಕು ಅಂತನ್ನಿಸುವ ಹಾಡು ಕೊಡಬೇಕು ಅಂತ ತುಂಬ ಶ್ರಮ ಹಾಕಿದ್ದೇವೆ. ತುಳುನಲ್ಲಿ ನಾನೇ ಸಾಹಿತ್ಯ ಬರೆದಿದ್ದೇನೆ, ಕನ್ನಡದಲ್ಲಿ ಕೀರ್ತನ್​ ಭಂಡಾರಿ ಬರೆದಿದ್ದಾರೆ. ಎರಡೂ ಭಾಷೆಗಳಲ್ಲಿ ರಜತ್​ ಹೆಗ್ಡೆ ಹಾಡಿದ್ದಾರೆ. ಹಾಡಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ. ನಾಯಕಿ ಅದ್ವಿತಿ, "ನನ್ನ ಮಾತೃಭಾಷೆ ತುಳು. "ಜೈ' ನನಗೆ ಮೊದಲ ತುಳು ಚಿತ್ರವಾದ ಕಾರಣ ಸ್ಪೆಷಲ್​. ನಾನಿಲ್ಲಿ ಪತ್ರಕತೆರ್ಯ ಪಾತ್ರದಲ್ಲಿ ನಟಿಸಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.

ರಿಲೀಸ್​ಗೂ ಮುನ್ನವೇ ಜೈ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ವಿಭಿನ್ನ ಪ್ರಚಾರದಿಂದ ಗಮನ ಸೆಳೆದಿರುವ ಚಿತ್ರತಂಡ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಪ್ರೀಮಿಯರ್​ನಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಅ.24ರಂದು ಮಸ್ಕಟ್​ನಲ್ಲಿ ಮೊದಲ ಅಂತಾರಾಷ್ಟ್ರೀಯ ಪ್ರೀಮಿಯರ್ ಆಯೋಜಿಸಿದ್ದ ಜೈ ಟೀಮ್​ ನಂತರ ಅ. 26ರಂದು ಗೋವಾದಲ್ಲಿ ಭಾರತದ ಮೊದಲ ಪ್ರೀಮಿಯರ್ ಆಯೋಜಿಸಿತ್ತು. ದೇಶ, ವಿದೇಶದಲ್ಲಿ ಪ್ರೀಮಿಯರ್​ಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಜೋಷ್​ನಲ್ಲಿರುವ ಚಿತ್ರತಂಡ ಇದೀಗ ಬಹರೈನ್, ಕತಾರ್, ದುಬೈನಲ್ಲೂ ಪ್ರೀಮಿಯರ್ ಶೋಗಳನ್ನು ನಡೆಸಲು ಪ್ಲ್ಯಾನ್​ ಮಾಡಿಕೊಂಡಿದೆ. ಅಂದಹಾಗೆ ಇದೇ ನ. 14ರಂದು "ಜೈ' ತೆರೆಗೆ ಬರಲಿದೆ.