ಬೆಂಗಳೂರು: ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಘೋಷಣೆಯಾಗುತ್ತದೆ ಎಂದು ಕಾದು ಕುಳಿತಿರುವ ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ನಿರಾಸೆ ಮೂಡಿಸಿದ್ದಾರೆ. ಆದರೆ, ಅವರು ಕಂಡಿರುವ ಕನಸು ಮತ್ತು ಹಾಕಿಕೊಂಡಿರುವ ಗುರಿ ಮಾತ್ರ ಅಭಿಮಾನಿಗಳ ಮೈ ರೋಮಾಂಚನಗೊಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಹೌದು, ಅನುಪಮಾ ಸಂದರ್ಶನದಲ್ಲಿ ಗೇಮ್ ಚೇಂಜರ್ ಸಾಧನೆಯ ಗುರಿ ಅನಾವರಣ ಆಗಿದೆ. ಜನವರಿ 8ರಂದು ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ ಆಗುವುದಿಲ್ಲ ಎಂದು ರಾಕಿಭಾಯ್ ಖಚಿತಪಡಿಸುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.
ಯಶ್ ಅವರ ಮುಂದಿನ ಪ್ರಾಜೆಕ್ಟ್ಗಾಗಿ 24x7 ಕೆಲಸ ನಡೆಯುತ್ತಿದೆ. ನನಗೂ ಸಮಯ ಕೊಡಿ. ನನಗೂ ಜವಾಬ್ದಾರಿ ಇದೆ ಎನ್ನುವ ಮೂಲಕ ಮುಂದಿನ ಸಿನಿಮಾ ಘೋಷಣೆಗೆ ಸಮಯ ಬೇಕು ಎಂದಿರುವ ಯಶ್, ವಿಳಂಬ ಆಗುತ್ತಿರುವುದಕ್ಕೆ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ.
ಇನ್ನು ಮಿಲಿಯನ್ ಡಾಲರ್ ಪ್ರಶ್ನೆಗೆ ರಾಕಿಂಗ್ ಸ್ಟಾರ್ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದು, ಕೆಜಿಎಫ್-3 ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಜೀವನ ಪಾಠದ ಜೊತೆಗೆ ಜೀವಮಾನದ ಕನಸನ್ನು ಸಹ ಬಹಿರಂಗಪಡಿಸಿದ್ದಾರೆ. ಇಡೀ ವಿಶ್ವವನ್ನು ಗೆಲ್ಲುವುದಕ್ಕೆ ಯಶ್ ಹೆಜ್ಜೆ ಇಡುತ್ತಿದ್ದಾರೆ. ಅಲೆಕ್ಸಾಂಡರ್ ಜಗತ್ತಿನ ದಂಡಯಾತ್ರೆ ಮಾಡಿದಂತೆ ಸಿನಿಮಾಗಾಗಿ ರಾಕಿಭಾಯ್ ದಂಡಯಾತ್ರೆ ಮಾಡುತ್ತಿದ್ದಾರೆ.
ನನ್ನ ಗುರಿ ಏನಿದ್ರು ರೆಸ್ಟ್ ಆಫ್ ದಿ ವರ್ಲ್ಡ್ (ಉಳಿದ ವಿಶ್ವ) ಎಂದು ಗುಡುಗಿರುವ ರಾಜಾಹುಲಿ, ನಾನು ಆಳೋಕೆ ಬಂದವನು, ಅದಕ್ಕಾಗಿ ಹೋರಾಡುತ್ತೇನೆ ಎಂದಿದ್ದಾರೆ. ಇಡೀ ಜಗತ್ತಿಗೆ ಇಂಡಿಯನ್ ಸಿನಿಮಾ ತಾಕತ್ತನ್ನು ಪರಿಚಯಿಸಲು ರಾಕಿ ಸಜ್ಜಾಗಿದ್ದಾರೆ.
ಎಲ್ಲಿಯವರೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶ ಅಂತಾ ಹೇಳೋದು ಎಂದು ಯಶ್ ಬೇಸರ ಹೊರಹಾಕಿದ್ದಾರೆ. ಹಾಲಿವುಡ್ನಲ್ಲೂ ನಮ್ಮವರಿದ್ದಾರೆ. ನಾವೇಕೆ ಹಿಂದಿದ್ದೀವಿ ಅಂದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ಇದೇ ಸಂದರ್ಶನದಲ್ಲಿ ನೆಪೋಟಿಸಂ ಬಗ್ಗೆಯೂ ಮೌನ ಮುರಿದ್ದಾರೆ. ಯಾರಿಗೋಸ್ಕರ ಕಾಯ್ಬೇಡಿ, ಯಾರನ್ನು ಅವಲಂಬಿಸಬೇಡಿ ಎಂದು ಜೀವನ ಪಾಠ ಮಾಡಿದ್ದಾರೆ.
ಇಂಡಿಯಾ ಟೀಮ್ನಲ್ಲಿ 7 ಕ್ರಿಕೆಟರ್ಸ್ ತರಹ ಕನ್ನಡಿಗರು ಮಿಂಚ್ಬೇಕು. ಸಿನಿದುನಿಯಾದಲ್ಲಿ ಕನ್ನಡದ ನಿರ್ದೇಶಕರು, ತಂತ್ರಜ್ನರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡೋ ಬಿಗ್ ಡ್ರೀಮ್ ಅನ್ನು ಯಶ್ ಕಂಡಿದ್ದಾರೆ. ಕನ್ನಡ ಇಂಡಸ್ಟ್ರಿಯನ್ನು ಕಡೆಗಣಿಸಿ ನೋಡ್ಬೇಡಿ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)