ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಕೆಜಿಎ್ ಚಾಪ್ಟರ್ 2' ಬಳಿಕ ನಟ ಯಶ್ ಮತ್ತೆ ಬೇರೆ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ವಿಶೇಷ ಅಂದರೆ "ಕೆಜಿಎ್ 2' ಮುಹೂರ್ತ ಆಚರಿಸಿಕೊಂಡಿದ್ದು 2019ರ ಮಾ. 13ರಂದು. ರಿಲೀಸ್ ಆಗಿದ್ದು 2022ರ ಏ. 14ರಂದು. ಇದೀಗ ಬರೋಬ್ಬರಿ 1975 ದಿನಗಳ ನಂತರ ಅರ್ಥಾತ್ ಐದೂವರೆ ವರ್ಷಗಳ ಬಳಿಕ ಯಶ್ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ "ಟಾಕ್ಸಿಕ್' ಚಿತ್ರ ಕಳೆದ ವರ್ಷ ಡಿ. 8ರಂದು ಘೋಷಣೆಯಾಗಿತ್ತು. ಅದಾಗಿ ಎಂಟು ತಿಂಗಳ ನಂತರ ಅರ್ಥಾತ್ ಗುರುವಾರ (ಆ.8) ಚಿತ್ರದ ಮುಹೂರ್ತ ನೆರವೇರಿಸಲಾಗಿದೆ. ಅದಕ್ಕೂ ಮುನ್ನ ಯಶ್, ಸುರ್ಯ ಸದಾಶಿವ ರುದ್ರ ದೇವಸ್ಥಾನ ಮತ್ತು ಧರ್ಮಸ್ಥಳಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಇದು ಯಶ್ ಅಭಿನಯದ 19ನೇ ಚಿತ್ರವಾಗಿದ್ದು, ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ "ಟಾಕ್ಸಿಕ್' ಚಿತ್ರವನ್ನು 2025ರ ಏ. 10ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಅರ್ಥಾತ್ ಇನ್ನು ಕೇವಲ ಎಂಟು ತಿಂಗಳಲ್ಲಿ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿ, ಪೋಸ್ಟ್&ಪ್ರೊಡಕ್ಷನ್ ಮುಗಿಸಿ, ಸೆನ್ಸಾರ್ ಮಾಡಿಸಿ, ತೆರೆಗೆ ತರುವ ಸವಾಲು ನಿರ್ದೇಶಕಿ ಗೀತು ಮೋಹನ್ದಾಸ್ ಮತ್ತು ತಂಡದ ಮುಂದಿದೆ. ಅದಕ್ಕೆ ತಕ್ಕಂತೆ ಪ್ರಿ&ಪ್ರೊಡಕ್ಷನ್ ಹಂತದಲ್ಲಿಯೇ ಚಿತ್ರತಂಡ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಕ್ಲ್ಯಾಪ್ ಮಾಡಿದ್ದು ಸೆಟ್ಬಾಯ್
ಎಚ್ಎಂಟಿ ಫ್ಯಾಕ್ಟರಿಯಲ್ಲಿ "ಟಾಕ್ಸಿಕ್' ಸೆಟ್ ಹಾಕಲಾಗಿದ್ದು, ಗುರುವಾರದ ಬ್ರಾಹ್ಮೀ ಮುಹೂರ್ತದಲ್ಲಿ ಚಿತ್ರತಂಡ ಪೂಜೆ ನೆರವೇರಿಸಿದೆ. ಈ ಸಂದರ್ಭದಲ್ಲಿ "ಟಾಕ್ಸಿಕ್' ನಾಯಕ ನಟ ಯಶ್, ನಿರ್ಮಾಪಕ ಕೆ. ವೆಂಕಟ್ ನಾರಾಯಣ್, ನಿರ್ದೇಶಕಿ ಗೀತು ಮೋಹನ್ದಾಸ್ ಸೇರಿ ಇಡೀ ಚಿತ್ರತಂಡ ಭಾಗವಹಿಸಿದೆ. ವಿಶೇಷ ಅಂದರೆ ಸೆಟ್ಬಾಯ್ ಸುನಿಲ್ ಪ್ಯಾನ್ ವರ್ಲ್ಡ್ "ಟಾಕ್ಸಿಕ್' ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ದಾರೆ. ಆ ಮೂಲಕ ಚಿತ್ರರಂಗದ ಕಾರ್ಮಿಕರು ಮತ್ತು ತಂತ್ರಜ್ಞರ ಮೇಲಿರುವ ಗೌರವವನ್ನು ಚಿತ್ರತಂಡ ತೋರಿದೆ. ಮುಹೂರ್ತದ ಬಳಿಕ ಗುರುವಾರದಿಂದಲೇ ಶೂಟಿಂಗ್ ಸಹ ಪ್ರಾರಂಭಿಸಲಾಗಿದೆ.