‘ಇಲ್ಲಿ ನಾನು ನಿಮಿತ್ತ ಮಾತ್ರ. ಇದು ನಿರ್ವಪಕ ಉಮಾಪತಿ ಮತ್ತು ನಿರ್ದೇಶಕ ತರುಣ್ ಅವರ ಕನಸಿನ ಕೂಸು ...’
ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ರಾಬರ್ಟ್’ ಇಂದು ಬಿಡುಗಡೆಯಾಗುತ್ತಿದೆ. ‘ರಾಬರ್ಟ್’ನಲ್ಲಿ ನಿಮ್ಮ ಪಾತ್ರವೇನು ಎಂದರೆ, ಹೀಗೆ ಒಂದೇ ಸಾಲಿನಲ್ಲಿ ಹೇಳುತ್ತಾರೆ ದರ್ಶನ್. ಕಾರಣ, ಈ ಚಿತ್ರ ರೂಪುಗೊಳ್ಳುವಲ್ಲಿ ಅವರಿಬ್ಬರ ಪಾತ್ರ ಬಹಳ ದೊಡ್ಡದಿದೆಯಂತೆ. ಅದೇ ಕಾರಣಕ್ಕೆ, ಇದು ಅವರಿಬ್ಬರ ಕನಸಿನ ಕೂಸು ಎಂದು ದರ್ಶನ್ ಪದೇಪದೆ ಹೇಳುತ್ತಲೇ ಇದ್ದಾರೆ.
‘ಬರೀ ದುಡ್ಡಿದ್ದರೆ ಸಿನಿಮಾ ಆಗುವುದಿಲ್ಲ ಅಥವಾ ದುಡ್ಡು ಹಾಕಿ ಮನೆಯಲ್ಲಿರುತ್ತೇನೆ ಅನ್ನೋದಲ್ಲ. ಇಲ್ಲಿ ಪ್ರಮೋಶನ್ ಬಹಳ ಮುಖ್ಯ. ಜನರಿಗೆ ಮುಟ್ಟುವವರೆಗೂ ಅದನ್ನು ಕ್ಯಾರಿ ಮಾಡಬೇಕು. ದರ್ಶನ್ ಇದ್ದಾನೆ, ಜನ ಬರುತ್ತಾರೆ ಅಂತ ಸುಮ್ಮನಿರುವ ಹಾಗಿಲ್ಲ. ನಾನು 53 ಸಿನಿಮಾ ಮಾಡಿದ್ದೀನಿ. ಜನ ನೋಡಿದ್ದಾರೆ. ಈ ಚಿತ್ರಕ್ಕೂ ಅದೇ ಪ್ರೀತಿಯಿಂದ ಬಂದು ನೋಡಬಹುದು. ಆದರೆ, ಯಾಕೆ ಬರಬೇಕು ಎನ್ನುವುದು ಬಹಳ ಮುಖ್ಯ. ಅದಕ್ಕೆ ನಾವು ಚಿತ್ರದ ವಿಶೇಷತೆಗಳನ್ನು ಜನರಿಗೆ ತಿಳಿಸುತ್ತಿರಬೇಕು. ಇದಕ್ಕೆ ಪ್ಯಾಶನ್ ಬಹಳ ಮುಖ್ಯ. ಉಮಾಪತಿ ಪ್ಯಾಶನ್ ಇರುವ ನಿರ್ವಪಕರು. ಚಿತ್ರದ ಆರಂಭದಲ್ಲಿ ಯಾವ ಉತ್ಸಾಹದಲ್ಲಿದ್ದರೋ, ಈಗಲೂ ಅದೇ ಉತ್ಸಾಹದಲ್ಲಿದ್ದಾರೆ’ ಎನ್ನುತ್ತಾರೆ ದರ್ಶನ್.
ಇನ್ನು, ತರುಣ್ ಸುಧೀರ್ ಬಗ್ಗೆ ಮಾತನಾಡುವ ದರ್ಶನ್, ‘‘ಚೌಕ’ ಮಾಡುವಾಗಲೇ ತರುಣ್ ಒನ್ಲೈನ್ ಹೇಳಿದ್ದ. ಚೆನ್ನಾಗಿದೆ ಎಂದನಿಸಿ, ಅದನ್ನು ಬೆಳೆಸುವುದಕ್ಕೆ ಹೇಳಿದ್ದೆ. ಆಗಿನ್ನೂ ಉಮಾಪತಿ ಅವರು ಚಿತ್ರವನ್ನು ನಿರ್ವಿುಸಬಹುದು ಎಂದು ಗೊತ್ತಿರಲಿಲ್ಲ. ಉಮಾಪತಿಗೆ ಚಿತ್ರ ಮಾಡಬೇಕು ಅಂತ ಫಿಕ್ಸ್ ಆದಾಗ, ಅವರಿಗೆ ಒಮ್ಮೆ ತರುಣನ ಹತ್ತಿರ ಕಥೆ ಕೇಳಿ ಎಂದೆ. ಅವರು ಕೇಳಿ ಖುಷಿಯಾಗಿ, ಇದನ್ನೇ ಮಾಡೋಣ ಎಂದರು. ಹಾಗೆ ಶುರುವಾದ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ’ ಎನ್ನುತ್ತಾರೆ ದರ್ಶನ್.
‘ರಾಬರ್ಟ್’ ಚಿತ್ರವು ಪ್ರೇಕ್ಷಕರು ಇಟ್ಟಿರುವ ಅಭಿಮಾನ ಮತ್ತು ನಿರೀಕ್ಷೆಗೆ ಹುಸಿಯಾಗುವುದಿಲ್ಲ ಎಂಬುದು ದರ್ಶನ್ ಅಭಿಪ್ರಾಯ. ‘ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ. ಒಂದಿಷ್ಟು ಮಾಸ್ ಅಂಶಗಳಿವೆ. ಸುಮ್ಮನೆ, ಹೀರೋಯಿಸಂ ಇರುವುದಿಲ್ಲ. ಸನ್ನಿವೇಶಗಳೇ ಹಾಗಿರುವುದರಿಂದ ಒಂದಕ್ಕೊಂದು ಪೂರಕವಾಗಿವೆ. ಚಿತ್ರದಲ್ಲೊಂದು ಸಂದೇಶ ಸಹ ಇದೆ. ಚಿತ್ರದಲ್ಲಿ ಹಲವು ಜನಪ್ರಿಯ ಕಲಾವಿದರಿದ್ದಾರೆ. ಏಕೆಂದರೆ, ಸಿನಿಮಾ ಒಬ್ಬರಿಂದ ಆಗುವುದಕ್ಕೆ ಸಾಧ್ಯವಿಲ್ಲ. ಎಲ್ಲರೂ ಜತೆಯಾಗಿ ಸೇರಿದರೆ ಮಾತ್ರ ಒಂದು ಸಿನಿಮಾ ಸಾಧ್ಯ’ ಎನ್ನುತ್ತಾರೆ. ಟ್ರೇಲರ್ ನೋಡಿದರೆ, ಈ ಚಿತ್ರದಲ್ಲಿ ದರ್ಶನ್ ಹೀರೋನಾ? ವಿಲನ್ನಾ? ಎಂಬುದು ಗೊತ್ತಾಗುವುದಿಲ್ಲ. ಇಷ್ಟಕ್ಕೂ ಅವರೇನು ಎಂಬ ಪ್ರಶ್ನೆ ಮುಂದಿಟ್ಟರೆ, ‘ನಿಮಗೆ ದರ್ಶನ್ನ ಯಾವ ರೀತಿ ನೋಡಬೇಕು ಅಂತನಿಸಿದರೆ ಹಾಗಿರುತ್ತೀನಿ’ ಎನ್ನುತ್ತಾರೆ. ‘ಒಳ್ಳೆಯವನು ಎಂದರೆ ಒಳ್ಳೆಯವನಾಗಿ ಕಾಣಿಸುತ್ತೀನಿ. ಪೊರ್ಕಿ ರೋಲ್ ಎಂದರೆ ಆ ತರಹವೂ ಇರುತ್ತೀನಿ. ಜವಾಬ್ದಾರಿ ತಂದೆ ಪಾತ್ರದಲ್ಲೂ ಇದ್ದೀನಿ. ಒಟ್ಟಾರೆ, ಎಲ್ಲಾ ಆಂಗಲ್ನಲ್ಲೂ ಈ ಚಿತ್ರದಲ್ಲಿ ಕಾಣಿಸುತ್ತೇನೆ’ ಎಂಬ ಉತ್ತರ ಅವರಿಂದ ಬರುತ್ತದೆ.
ದಾಖಲೆ ಪ್ರದರ್ಶನ
ಚಿತ್ರತಂಡದವರು ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ, ‘ರಾಬರ್ಟ್’ ಚಿತ್ರವು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ಗಳೂ ಸೇರಿ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆಯಂತೆ. ‘ರಾಬರ್ಟ್’ ನ ತೆಲುಗು ಅವತರಣಿಕೆಯು ಆಂಧ್ರದ 433 ಮತ್ತು ತೆಲಂಗಾಣದ 407 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆಯಂತೆ. ಮೂರೂ ರಾಜ್ಯಗಳ ಚಿತ್ರಮಂದಿರಗಳನ್ನು ಲೆಕ್ಕ ಹಾಕಿದರೆ, ಈ ಸಂಖ್ಯೆ ಒಂದೂವರೆ ಸಾವಿರ ದಾಟುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು, ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳು ಆಯೋಜಿತವಾಗಿದ್ದು, ಈ ಪೈಕಿ ಹಲವು ಚಿತ್ರಮಂದಿರಗಳಲ್ಲಿ ದರ್ಶನ್ ಅಭಿಮಾನಿಗಳಿಗೆಂದೇ ಬೆಳಿಗ್ಗೆ 6 ಗಂಟೆಗೆ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇಂದು ಮಹಾಶಿವರಾತ್ರಿಯಾದ್ದರಿಂದ, ಕೆಲವು ಚಿತ್ರಮಂದಿರಗಳಲ್ಲಿ ಜಾಗರಣೆಗೆ ಮಧ್ಯರಾತ್ರಿ 12ಕ್ಕೆ ಪ್ರದರ್ಶನವನ್ನು ಆಯೋಜಿಸಲಾಗಿದೆ. ಒಟ್ಟಾರೆ, ‘ರಾಬರ್ಟ್’ ಚಿತ್ರವು ದರ್ಶನ್ ಅವರ ಚಿತ್ರಜೀವನದಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲೇ ದಾಖಲೆಯ ಓಪನಿಂಗ್ ಪಡೆಯುತ್ತಿದೆ ಎಂದು ಹೇಳಲಾಗುತ್ತಿದೆ.