RJ Mahvash 
ಸಿನಿವಾಣಿ

RJ Mahvash: ಅವನು ನನ್ನ ಜೀವನವೇ ಹಾಳು ಮಾಡಿದ… ಆರ್‌ಜೆ ಮಹ್ವಾಶ್‌ ಶಾಕಿಂಗ್‌ ಹೇಳಿಕೆ!

ಮುಂಬೈ: ಜನಪ್ರಿಯ ರೇಡಿಯೋ ಜಾಕಿ ಮತ್ತು ಸೋಶಿಯಲ್‌ ಮೀಡಿಯಾ ಇನ್‌ಫ್ಲುವೆನ್ಸರ್‌ ಆರ್‌ಜೆ ಮಹ್ವಾಶ್‌ ( RJ Mahvash ) ತಮ್ಮ ವೈಯಕ್ತಿಕ ಜೀವನದ ನೋವಿನ ಅನುಭವವನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ಮಾಜಿ ನಿಶ್ಚಿತಾರ್ಥಿತ ವ್ಯಕ್ತಿಯಿಂದ ಮೂರೂ ಬಾರಿ ಮೋಸಕ್ಕೊಳಗಾದ ಬಳಿಕ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಆಸ್ಪತ್ರೆಯಲ್ಲೂ ದಾಖಲಾಗಬೇಕಾಯಿತು ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಮಹ್ವಾಶ್‌, ತಮ್ಮ ಜೀವನದ ಅತ್ಯಂತ ಕಠಿಣ ಹಂತವನ್ನು ನೆನಪಿಸಿಕೊಂಡಿದ್ದಾರೆ. ಕೇವಲ 19ನೇ ವಯಸ್ಸಿನಲ್ಲಿ ತಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೆ ಎಂದು ಹೇಳಿದ ಅವರು, ಮೂರು ವರ್ಷಗಳ ಸಂಬಂಧದ ಅವಧಿಯಲ್ಲಿ ತಮ್ಮ ಮಾಜಿ ಪ್ರಿಯತಮ ಮೂರೂ ಬಾರಿ ಮೋಸ ಮಾಡಿದ್ದ ಎಂದು ತಿಳಿಸಿದ್ದಾರೆ. ಈ ಘಟನೆ ತಮ್ಮ ಜೀವನವನ್ನೇ ಸಂಪೂರ್ಣವಾಗಿ ಬದಲಿಸಿತು ಎಂದು ಅವರು ಹೇಳಿದ್ದಾರೆ.
“ಮೊದಲ ಎರಡು ಬಾರಿ ಸಹಿಸಿಕೊಂಡೆ. ಆದರೆ ಮೂರನೇ ಬಾರಿ ಮೋಸ ಮಾಡಿದಾಗ ನಾನು ಸಂಪೂರ್ಣವಾಗಿ ಕುಗ್ಗಿಬಿಟ್ಟೆ” ಎಂದು ಮಹ್ವಾಶ್‌ ಹೇಳಿದ್ದಾರೆ. ಸಂಬಂಧ ಮುರಿದ ಬಳಿಕ ತಾವು ತೀವ್ರ ಖಿನ್ನತೆಗೆ ಒಳಗಾಗಿದ್ದೆ ಎಂದು ಅವರು ತಿಳಿಸಿದ್ದಾರೆ. ಪರಿಸ್ಥಿತಿ ಅಷ್ಟು ಗಂಭೀರವಾಗಿತ್ತು ಎಂದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಯಿತು ಎಂದು ಹೇಳಿದ್ದಾರೆ.
ತಮ್ಮ ಮಾನಸಿಕ ಸ್ಥಿತಿ ಕುರಿತು ಮಾತನಾಡಿದ ಮಹ್ವಾಶ್‌, “ನನಗೆ ಪ್ಯಾನಿಕ್‌ ಅಟ್ಯಾಕ್‌ಗಳು ಬರುತ್ತಿದ್ದವು. ತೀವ್ರ ಔಷಧಿ ಮತ್ತು ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳಬೇಕಾಯಿತು. ಕೆಲ ಸಂದರ್ಭಗಳಲ್ಲಿ ನನಗೆ ಭ್ರಮೆಗಳು ಕಾಣಿಸುತ್ತಿದ್ದವು” ಎಂದು ಹೇಳಿದ್ದಾರೆ. ಔಷಧಿಗಳ ಪರಿಣಾಮದಿಂದ ತಾವು ಹ್ಯಾಲ್ಯೂಸಿನೇಷನ್‌ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ತಮ್ಮ ಮಾಜಿ ನಿಶ್ಚಿತಾರ್ಥಿತ ವ್ಯಕ್ತಿ ತಮಗೆ “ಮೆಂಟಲ್‌ ಪೇಷೆಂಟ್‌” ಎಂದು ಕರೆದಿದ್ದಾನೆ ಎಂದು ಮಹ್ವಾಶ್‌ ಬೇಸರ ವ್ಯಕ್ತಪಡಿಸಿದ್ದಾರೆ. ಮಾನಸಿಕವಾಗಿ ಈಗಾಗಲೇ ಕುಗ್ಗಿದ್ದ ಸಮಯದಲ್ಲಿ ಇಂತಹ ಮಾತುಗಳು ಇನ್ನಷ್ಟು ನೋವು ತಂದವು ಎಂದು ಅವರು ಹೇಳಿದ್ದಾರೆ. ಬಳಿಕ ಆ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಗೂ ಮೋಸ ಮಾಡಿದ್ದಾನೆ ಎಂಬುದು ತಿಳಿದುಬಂದಾಗ ತಾವು ಮತ್ತಷ್ಟು ಬೆಚ್ಚಿಬಿದ್ದೆ ಎಂದು ಹೇಳಿದ್ದಾರೆ.
ಮಹ್ವಾಶ್‌ ಹೇಳಿಕೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸಂಬಂಧಗಳಲ್ಲಿ ಮೋಸ, ಮಾನಸಿಕ ಒತ್ತಡ ಮತ್ತು ಭಾವನಾತ್ಮಕ ಕುಸಿತ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅನೇಕರು “ಮಾನಸಿಕ ಆರೋಗ್ಯವೂ ದೈಹಿಕ ಆರೋಗ್ಯದಷ್ಟೇ ಮುಖ್ಯ” ಎಂದು ಕಾಮೆಂಟ್‌ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಹ್ವಾಶ್‌ ಹೆಸರು ಭಾರತೀಯ ಕ್ರಿಕೆಟಿಗ Yuzvendra Chahal ಜೊತೆ ಕೇಳಿಬರುತ್ತಿತ್ತು. ಆದರೆ ಈ ಕುರಿತು ಪ್ರತಿಕ್ರಿಯಿಸಿದ್ದ ಅವರು, ಚಹಲ್‌ ತಮ್ಮ ಒಳ್ಳೆಯ ಸ್ನೇಹಿತ ಮಾತ್ರ ಎಂದು ಸ್ಪಷ್ಟಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಡೇಟಿಂಗ್‌ ವದಂತಿಗಳಿಗೆ ಅವರು ಇತ್ತೀಚೆಗಷ್ಟೇ ತೆರೆ ಎಳೆದಿದ್ದರು.
ಈ ನಡುವೆ ಮಹ್ವಾಶ್‌ ತಮ್ಮ ವೃತ್ತಿ ಬದುಕಿನಲ್ಲೂ ಬ್ಯುಸಿಯಾಗಿದ್ದಾರೆ. ಅವರು ನಟಿಸುತ್ತಿರುವ ಹೊಸ ವೆಬ್‌ ಸಿರೀಸ್‌ ಮತ್ತು ಸಿನಿಮಾ ಪ್ರಾಜೆಕ್ಟ್‌ಗಳ ಕುರಿತೂ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ವೈಯಕ್ತಿಕ ಜೀವನದಲ್ಲಿ ಕಠಿಣ ಅನುಭವ ಎದುರಿಸಿದ್ದರೂ, ಈಗ ಆತ್ಮವಿಶ್ವಾಸದಿಂದ ಬದುಕನ್ನು ಮುಂದುವರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ,(ಏಜೆನ್ಸೀಸ್​).