ಸಿನಿವಾಣಿ

ರಿಷಿ ಕಪೂರ್​ ಕೊನೆಯ ಟ್ವೀಟ್ ಸಂದೇಶ ಹೀಗಿತ್ತು...

ಮುಂಬೈ: ಬಾಲಿವುಡ್​ನ ಹಿರಿಯ ನಟ ರಿಷಿ ಕಪೂರ್​ (67) ಗುರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಎರಡು ವರ್ಷದ ಹಿಂದೆ ಅವರಿಗೆ ಕ್ಯಾನ್ಸರ್​ ಇರುವುದು ಖಚಿತವಾಗಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೆ ಅಮೆರಿಕದಲ್ಲೂ ಕೆಲಕಾಲ ಚಿಕಿತ್ಸೆ ಪಡೆದಿದ್ದ ಅವರು ಕೊನೆಯದಾಗಿ ಸಾಮಾಜಿಕ ತಾಣ ಟ್ವಿಟರ್​ನಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿದ್ದು ಶ್ರೀರಾಮ ನವಮಿಯಂದು.

ಅಂದು ಅವರು ಒಟ್ಟು ನಾಲ್ಕು ಟ್ವೀಟ್ ಅಪ್ಡೇಟ್ ಮಾಡಿದ್ದರು. ಶ್ರೀರಾಮ ನವಮಿ ಆದ ಕಾರಣ ಅವರು ಅಂದು ಮೊದಲ ಟ್ವೀಟ್​ನಲ್ಲಿ ಎಲ್ಲರಿಗೂ ಶುಭಾಶಯಗಳನ್ನು ಕೋರಿದ್ದರು.

ಇದರ ಜತೆಗೇ ಮಾಡಿದ ಇನ್ನೊಂದು ಟ್ವೀಟ್​ನಲ್ಲಿ ಸರ್ಗಂ ಚಿತ್ರದ ಹಾಡಿನ ತುಣುಕೊಂದನ್ನು ಅಪ್ಲೋಡ್ ಮಾಡಿದ್ದಾರೆ. ಅದು ಶ್ರೀರಾಮನ ಕುರಿತಾದ್ದೇ ಆಗಿದೆ. 1979ರಲ್ಲಿ ಮಹಾರಾಷ್ಟ್ರದ ಪಂಚಗಣಿಯ ವಾಯಿ ಎಂಬಲ್ಲಿ ಚಿತ್ರೀಕರಿಸಿದ್ದನ್ನೂ ಅವರು ಸ್ಮರಿಸಿಕೊಂಡಿದ್ದಾರೆ.

ನಿಮ್ಮಂತೆ ಡಲ್ಫಿ ಹೊಡೆಯುವುದಕ್ಕೆ ಯಾರಿಗೂ ಬರಲ್ಲ! ನಿಜ ಹೇಳಬೇಕು ಅಂದರೆ ಪರದೆ ಮೇಲೆ ನೀವು ಬಹುತೇಕ ಪ್ರತಿಯೊಂದು ಸಂಗೀತೋಪಕರಣವನ್ನೂ ನುಡಿಸಿದ್ದೀರಿ. ಆದರೂ, ಡಲ್ಫಿ, ಎಲ್ಲದರಲ್ಲೂ ಬೆಸ್ಟ್​ ಎಂದು ಕುಣಾಲ್ ಕೊಹ್ಲಿ ಮಾಡಿರುವ ಟ್ವೀಟ್​ಗೆ ಉತ್ತರಿಸಿರುವ ರಿಷಿ ಕಪೂರ್​, ಇದರ ಸಂಪೂರ್ಣ ಕ್ರೆಡಿಟ್ ಕೂಡ ಕೊರಿಯೋಗ್ರಾಫರ್ ಆಗಿದ್ದ ದಿವಂಗತ ಶ್ರೀ ಪಿ.ಎಲ್​. ರಾಜ್​ ಜಿ ಅವರಿಗೆ ಸಲ್ಲಬೇಕು. ಪರದೆ ಮೇಲೆ ಅದನ್ನು ನುಡಿಸೋದಕ್ಕೂ ಸಣ್ಣ ಪ್ರಮಾಣದ ತಿಳಿವಳಿಕೆ, ಪ್ರತಿಭೆ ಕೂಡ ಅಗತ್ಯವಿದೆ. ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದರು.

ಇನ್ನು, ಆ ದಿನದ ಮತ್ತು ಬದುಕಿನ ಕೊನೆಯ ಟ್ವೀಟ್​ ಸಾಮಾಜಿಕ ಕಳಕಳಿಯದ್ದಾಗಿತ್ತು. ಸಮಾಜದ ಎಲ್ಲ ಸ್ತರದ, ನಂಬಿಕೆಗಳನ್ನು ಹೊಂದಿರುವ ಎಲ್ಲ ಸೋದರ, ಸೋದರಿಯರೇ ನಿಮ್ಮ ಕೈ ಮುಗಿದು ಕೇಳಿಕೊಳ್ಳುವುದಿಷ್ಟೇ ಎಂದು ಆರಂಭಿಸಿರುವ ಟ್ವೀಟ್​​ನಲ್ಲಿ ಲಾಕ್​ಡೌನ್ ಅವಧಿಯಲ್ಲಿ ಹಿಂಸಾಚಾರಕ್ಕೆ ಇಳಿಯುವುದು, ಗುಂಪು ಹತ್ಯೆ ಮಾಡುವುದು, ಡಾಕ್ಟರ್ಸ್​, ನರ್ಸ್​ಗಳು, ವೈದ್ಯ ಸಿಬ್ಬಂದಿ, ಪೊಲೀಸರು ಇತ್ಯಾದಿ ಯಾರ ಮೇಲೂ ಹಲ್ಲೆ ನಡೆಸಬೇಡಿ. ಅವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನಿಮ್ಮನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಮರೆಯಬೇಡಿ. ನಾವು ಒಟ್ಟಾಗಿ ಕರೊನಾ ವಿರುದ್ಧದ ಸಮರ ಗೆಲ್ಲೋಣ ಪ್ಲೀಸ್ ಎಂದು ಹೇಳಿಕೊಂಡಿದ್ದರು.