ಬೆಂಗಳೂರು: ಕಲ್ಕಿ 2898 AD ಚಿತ್ರಕ್ಕಾಗಿ ಪ್ರಪಂಚದಾದ್ಯಂತದ ಚಲನಚಿತ್ರ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕಲ್ಕಿ ಸಿನಿಮಾ ಜೂನ್ 27ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಕೂಡ ನಟಿಸಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ ಈಗಾಗಲೇ ಬುಜ್ಜಿ ಪಾತ್ರ ಎಲ್ಲರ ಗಮನ ಸೆಳೆದಿದೆ. ಈ ಪಾತ್ರಕ್ಕೆ ಜನಪ್ರಿಯ ನಾಯಕಿ ಕೀರ್ತಿ ಸುರೇಶ್ ಕೂಡ ಧ್ವನಿ ನೀಡಿದ್ದಾರೆ.
ಬುಜ್ಜಿ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಲು ಕೆಲವು ದಿನಗಳ ಹಿಂದೆ ಅದ್ಧೂರಿ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಆ ನಂತರ ಹಲವೆಡೆ ಬುಜ್ಜಿ ವಾಹನವನ್ನು ಓಡಿಸಿದ ಘಟನೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಟ ನಾಗಚೈತನ್ಯ ಹಾಗೂ ಉದ್ಯಮಿ ಆನಂದ್ ಮಹೀಂದ್ರಾ ಬುಜ್ಜಿಯನ್ನು ಓಡಿಸಿದ್ದಾರೆ. ಇದೀಗ ಅದೇ ಬುಜ್ಜಿಯನ್ನು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇತ್ತೀಚೆಗಷ್ಟೇ ರಿಷಬ್ ಅವರು ಬುಜ್ಜಿ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬುಜ್ಜಿಯನ್ನು ಕುಂದಾಪುರಕ್ಕೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ರಿಷಬ್ ವಾಹನ ಏರಿ ಮೂರ್ನಾಲ್ಕು ರೌಂಡ್ ಹಾಕಿದ್ದಾರೆ. ಈ ವಿಡಿಯೋವನ್ನು ಕಲ್ಕಿ ತಂಡ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡಿದೆ. ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬುಜ್ಜಿಯನ್ನು ಡ್ರೈವಿಂಗ್ ಮಾಡಿದ ಅನುಭವದ ಬಗ್ಗೆ ಮಾತನಾಡಿರುವ ರಿಷಬ್, ಬುಜ್ಜಿಯನ್ನು ಓಡಿಸಿದ್ದು ಅದ್ಭುತ ಅನುಭವ. ಭೈರವ ಮತ್ತು ಬುಜ್ಜಿಗೆ ಒಳ್ಳೆಯದಾಗಲಿ. ಇದೇ ಜೂನ್ 27ರಂದು ಕಲ್ಕಿ ಬಿಡುಗಡೆಯಾಗಲಿದ್ದು, ಎಲ್ಲರು ಚಿತ್ರಮಂದಿರಕ್ಕೆ ಹೋಗಿ, ದೊಡ್ಡ ಪರದೆಯ ಮೇಲೆ ಸಿನಿಮಾವನ್ನು ಎಂಜಾಯ್ ಮಾಡಿ. ಪ್ರಭಾಸ್ ಸರ್ಗೆ ಒಳ್ಳೆಯದಾಗಲಿ ಎಂದು ಕಲ್ಕಿ ಸಿನಿಮಾಗೆ ರಿಷಬ್ ಶೆಟ್ಟಿ ಶುಭ ಹಾರೈಸಿದ್ದಾರೆ.
ಅಂದಹಾಗೆ ರಿಷಬ್ ಶೆಟ್ಟಿ ಪ್ರಸ್ತುತ ಕಾಂತಾರ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬರಹಗಾರ ಮತ್ತು ನಿರ್ದೇಶಕರಾಗಿ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಿನಿಪ್ರೇಮಿಗಳಲ್ಲಿ ಒಳ್ಳೆಯ ನಿರೀಕ್ಷೆಗಳಿವೆ. (ಏಜೆನ್ಸೀಸ್)