ಸಿನಿವಾಣಿ

ರಿಯಾ ಕೊಟ್ಟ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಕೇಸಿನಲ್ಲಿ, ಕಳೆದ ಕೆಲವು ದಿನಗಳಿಂದ ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋಯವರು (ಎನ್​ಸಿಬಿ) ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೌವಿಕ್​ ಚಕ್ರವರ್ತಿ ಅವರನ್ನು ಗ್ರಿಲ್​ ಮಾಡುತ್ತಲೇ ಇದ್ದಾರೆ. ಈ ಮಧ್ಯೆ, ಡ್ರಗ್ಸ್​ ತೆಗೆದುಕೊಳ್ಳುತ್ತಿರುವ 25 ಬಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳನ್ನು ರಿಯಾ ಹೇಳಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

ಬಾಲಿವುಡ್​ನಲ್ಲಿ ನಶೆಯ ಜಾಲ ಬಹಳ ಆಳಕ್ಕೆ ಬೇರೂರಿದ್ದು, ಬಹಳಷ್ಟು ಸೆಲೆಬ್ರಿಟಿಗಳು ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇದೆ. ಹೀಗಿರುವಾಗ, ತನಿಖೆ ವೇಳೆಯಲ್ಲಿ ರಿಯಾ 25 ಜನರ ಹೆಸರುಗಳನ್ನು ಹೇಳಿದ್ದಾರೆ ಎನ್ನಲಾಗಿದೆ.

ಈ ಪಟ್ಟಿಯಲ್ಲಿ ಬರೀ ನಟ-ನಟಿಯರಷ್ಟೇ ಅಲ್ಲ, ನಿರ್ದೇಶಕರು, ನಿರ್ಮಾಪರು ಮತ್ತು ಇತರೆ ತಂತ್ರಜ್ಱರು ಸಹ ಇದ್ದಾರೆ ಎಂದು ಹೇಳಲಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಎನ್​ಸಿಬಿಯವರು ಇವರಿಗೆಲ್ಲಾ ಸಮನ್ಸ್​ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆದರೆ, ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬ ವಿಷಯವನ್ನು ಗೌಪ್ಯವಾಗಿಡಲಾಗಿದ್ದು, ಯಾರೆಲ್ಲಾ ಡ್ರಗ್ಸ್​ ತೆಗೆದುಕೊಳ್ಳುತ್ತಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಕುತೂಹಲಕ್ಕೆ ಸದ್ಯದಲ್ಲೇ ತೆರೆಬೀಳುವ ಸಾಧ್ಯತೆಯೂ ಇದೆ.

ಸುಶಾಂತ್​ ಸಿಂಗ್​ ರಜಪೂತ್​ ತಮ್ಮನ್ನು ಭೇಟಿಯಾಗುವುದಕ್ಕೆ ಮುನ್ನವೇ ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರು ಎಂದು ಈ ಹಿಂದೆ ರಿಯಾ ಹೇಳಿದ್ದರು. ಅಷ್ಟೇ ಅಲ್ಲ, 'ಕೇದಾರನಾಥ್​' ಚಿತ್ರದ ಚಿತ್ರೀಕರಣ ಸಂದರ್ಭದಲ್ಲೂ ಅವರು ಡ್ರಗ್ಸ್​ ತೆಗೆದುಕೊಂಡಿದ್ದರು ಎಂದು ಆರೋಪಿಸಿದ್ದರು.

ಈಗ ಸುಶಾಂತ್​ ಅಷ್ಟೇ ಅಲ್ಲ, ಬಾಲಿವುಡ್​ನಲ್ಲಿ 25ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಡ್ರಗ್ಸ್​ ಅಭ್ಯಾಸವಿದೆ ಮತ್ತು ಪಾರ್ಟಿಗಳಲ್ಲಿ ಅವರೆಲ್ಲಾ ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರಿಂದ ಹಲವು ಉಪಯುಕ್ತ ಮಾಹಿತಿಯನ್ನು ಕಲೆಹಾಕಿರುವ ಎನ್​ಸಿಬಿ, ಈ ನಿಟ್ಟಿನಲ್ಲಿ ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಸದ್ಯದಲ್ಲೇ ಈ ವಿಷಯವಾಗಿ ಹಲವರ ಮೇಲೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.